ಸ್ಟಾಲಿನ್ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ..ರಾತ್ರಿಯಿಡೀ ಭದ್ರತಾ ಅಧಿಕಾರಿಗಳು ನಿಗಾ!

flaight 1111
Published on

ಚೆನ್ನೈ: ಮುಖ್ಯಮಂತ್ರಿ ಸ್ಟಾಲಿನ್, ಅವರ ಪತ್ನಿ ದುರ್ಗಾ ಮತ್ತು ಅಧಿಕಾರಿಗಳು ಅಮೆರಿಕ ಪ್ರವಾಸ ಕೈಗೊಂಡಿದ್ದು, ಇದೇ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.

ಸ್ಟಾಲಿನ್ ಅವರ ಎಮಿರೇಟ್ಸ್ ವಿಮಾನ ನಿರ್ಗಮಿಸಿದ ಎರಡು ಗಂಟೆ ನಂತರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಇಮೇಲ್‌ನಲ್ಲಿ ಬಾಂಬ್ ಬೆದರಿಕೆ ಬಂದಿತ್ತು. ಇದರೊಂದಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನದಲ್ಲಿದ್ದ ಮುಖ್ಯಮಂತ್ರಿಯ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಟಾಲಿನ್ ಅವರ ವಿಮಾನ ಮಾತ್ರವಲ್ಲದೆ ಚೆನ್ನೈ ವಿಮಾನ ನಿಲ್ದಾಣ ನಿಲ್ದಾಣದಲ್ಲಿ ಸಹ ತಪಾಸಣೆ ನಡೆಸಲಾಯಿತು.

ಸ್ಟಾಲಿನ್ ಮತ್ತಿತರರು ಅಮೆರಿಕ ಪ್ರವಾಸಕ್ಕಾಗಿ ಮಂಗಳವಾರ ರಾತ್ರಿ 8.40 ಕ್ಕೆ ಚೆನ್ನೈನ ಮೀನಂಬಾಕ್ಕಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದರು. ಸಿಎಂ ಅಧಿಕೃತ ಪ್ರವಾಸದ ಪ್ರಕಾರ ಅವರು ಎಮಿರೇಟ್ಸ್ ವಿಮಾನದಲ್ಲಿ ಚೆನ್ನೈನಿಂದ ದುಬೈಗೆ ತೆರಳಿ ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಅವರು ಅಮೆರಿಕಕ್ಕೆ ತೆರಳಬೇಕಿತ್ತು. ಆದರೆ ರಾತ್ರಿ 10.16ಕ್ಕೆ ಹೊರಟಿದ್ದ ಎಮಿರೇಟ್ಸ್ ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಬಾಂಬ್ ಬೆದರಿಕೆ ಬಂದಿದೆ.

ಮಂಗಳವಾರ ರಾತ್ರಿ 7.55ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಸ್ಟಾಲಿನ್ ಇರುವ ವಿಮಾನ ಸ್ಫೋಟಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಮಾಡಿದ್ದ.

ಇನ್ನು ರಾತ್ರಿ 10 ಗಂಟೆಗೆ ಈ ಸಂದೇಶವನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪತ್ತೆ ಮಾಡಿದ್ದು, ಆ ವೇಳೆಗಾಗಲೇ ಸ್ಟಾಲಿನ್ ಪ್ರಯಾಣಿಸುತ್ತಿದ್ದ ವಿಮಾನ ತುಂಬಾ ದೂರ ಹೋಗಿತ್ತು. ಇದರಿಂದಾಗಿ ವಿಮಾನ ದುಬೈ ತಲುಪುವವರೆಗೂ ವಿಮಾನ ನಿಲ್ದಾಣದ ಅಧಿಕಾರಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಬುಧವಾರ ಬೆಳಗ್ಗೆ ವಿಮಾನ ದುಬೈಗೆ ಬಂದಿಳಿದ ಬಳಿಕ ಅಲ್ಲಿನ ಬಾಂಬ್ ಸ್ಕ್ವಾಡ್ ಕೂಲಂಕುಷವಾಗಿ ಪರಿಶೀಲನೆ ನಡೆಸಿ ಯಾವುದೇ ಬಾಂಬ್ ಇಲ್ಲ ಎಂದು ಖಚಿತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net