ಬೇಸಿಗೆಯಲ್ಲಿ ಹಾವುಗಳು ಮನೆಗಳಿಗೆ ಬರಲು ಕಾರಣ ಏನು; ಇದರಿಂದ ಸುರಕ್ಷಿತವಾಗಿರುವುದು ಹೇಗೆ?Snake

Snake
Published on

Snake|ಬೇಸಿಗೆಯ ಸಮಯದಲ್ಲಿ ವಿಷಕಾರಿ ಹಾವುಗಳು ಜನರು ವಾಸವಿರುವ ಮನೆಗಳಿಗೆ ಹೆಚ್ಚಾಗಿ ಪ್ರವೇಶ ಮಾಡುವುದನ್ನು ನಾವು ನೋಡಿರುತ್ತೇವೆ. ಹಾಗಾದರೆ ಬೇಸಿಗೆಯ ಸಂದರ್ಭದಲ್ಲೇ ಹೆಚ್ಚಾಗಿ ಹಾವುಗಳು ಕಾಣಿಸಿಕೊಳ್ಳಲು ಕಾರಣ ಏನೆಂಬುದನ್ನು ನಾವು ತಿಳಿಯೋಣ.

ಹಾವು ಶೀತರಕ್ತದ ಪ್ರಾಣಿಯಾಗಿದೆ, ಹಾಗಾಗಿ ಅದು ತನ್ನ ದೇಹದ ಉಷ್ಣತೆಯನ್ನು ಸರಿಯಾಗಿ ನಿಭಾಯಿಸಲು ಬೇಸಿಗೆಯಲ್ಲಿ ಬಿಸಿಲಿದ್ದಾಗ ಅದು ಸ್ವಲ್ಪ ತಂಪಾದ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತದೆ ಮತ್ತು ತುಂಬಾ ತಂಪಾಗಿರುವ ಪ್ರದೇಶದಲ್ಲಿದ್ದರೆ ಅದು ಬೆಚ್ಚಗಿನ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತದೆ ಎಂದು ಹಾವು ರಕ್ಷಕರು ಹೇಳುತ್ತಾರೆ.

ನಾಗರಹಾವುಗಳು, ಪಟ್ಟೆ ಮಂಡಲ ಹಾವುಗಳು ಮತ್ತು ಗಾಜಿನ ಮಂಡಲ ಹಾವುಗಳು ಹೆಚ್ಚಾಗಿ ಮನುಷ್ಯರು ವಾಸವಿರುವ ಮನೆಗಳಿಗೆ ಪ್ರವೇಶಿಸುವಂತಹ ವಿಷಕಾರಿ ಹಾವುಗಳು ಎನ್ನಲಾಗಿದೆ. ಕಾಡುಗಳಲ್ಲಿ ಆಹಾರದ ಕೊರತೆಯಿಂದಾಗಿ ಇಲಿಗಳಂತೆ ಹಾವುಗಳು ಸಹ ಆಹಾರವನ್ನು ಹುಡುಕುತ್ತಾ ವಸತಿ ಪ್ರದೇಶಗಳಿರುವ ಸ್ಥಳಕ್ಕೆ ಬರುತ್ತವೆ ಎನ್ನಲಾಗಿದೆ.

ಕಪ್ಪೆಗಳಿಂದ ತುಂಬಿರುವ ಕೊಳಗಳು ಮತ್ತು ಕೊಚ್ಚೆ ಗುಂಡಿಗಳು ಸೇರಿದಂತೆ ಜಲಮೂಲಗಳು ನಾಶವಾಗಿವೆ. ಹಾಗಾಗಿ ಇಲಿಗಳು ಹಾವುಗಳಿಗೆ ಮುಖ್ಯ ಆಹಾರವಾಗಿವೆ. ಆಹಾರ ತ್ಯಾಜ್ಯ ಹೆಚ್ಚಾಗಿ ಇರುವ ಸ್ಥಳಗಳಲ್ಲಿ ಇಲಿಗಳು ಕಂಡುಬರುತ್ತವೆ, ಆದ್ದರಿಂದ ಆಹಾರ ಹುಡುಕಾಟಕ್ಕೆ ಹಾವುಗಳು ಮನೆಗಳ ಬಳಿ ಬರುತ್ತವೆ. ಬಯಲು ಪ್ರದೇಶಗಳಲ್ಲಿ ಕಂಡುಬರುವ ವಿಷಕಾರಿಯಲ್ಲದ 24 ಜಾತಿಯ ಹಾವುಗಳು ಬೇಸಿಗೆಯ ಸಂದರ್ಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತವೆ. ಹಾಗಾಗಿ ಇಂತಹ ಸಂದರ್ಭದಲ್ಲಿ ನಾವು ಹೆಚ್ಚಿನ ಮರಿ ಹಾವುಗಳನ್ನು ರಕ್ಷಿಸಲು ಮುಂದಾಗುತ್ತೇವೆ ಎಂದು ಹಾವು ರಕ್ಷಕರು ಹೇಳುತ್ತಾರೆ.

ಬೇಸಿಗೆಯ ತಿಂಗಳುಗಳಲ್ಲಿ ಹಾವುಗಳು ಹೆಚ್ಚಾಗಿ ವಾಸದ ಮನೆಗಳ ಬಳಿ ಪ್ರವೇಶಿಸುತ್ತವೆ. ಆದರೆ ಸಂಶೋಧಕರ ಪ್ರಕಾರ, ಬೇಸಿಗೆಯಲ್ಲಿ ಹಾವುಗಳು ಮನೆಗಳ ಹತ್ತಿರ ಬರುವ ಸಾಧ್ಯತೆ ಹೆಚ್ಚು ಎಂದು ತೋರಿಸುವ ಯಾವುದೇ ಮೂಲ ಸಾಕ್ಷಿಗಳಿಲ್ಲ.

ಹಾವುಗಳು ಮನೆಯೊಳಗೆ ಬರದಂತೆ ಏನು ಮಾಡಬೇಕು?

ಜನರು ತಮ್ಮ ಮನೆಗಳಿಗೆ ಹಾವುಗಳು ಪ್ರವೇಶಿಸದಂತೆ ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಾರೆ. ಇದರ ಬಗ್ಗೆ ಉರಗ ಸಂಶೋಧಕರು ವಿವರಿಸಿದ್ದು, ಈ ನಿಯಮಗಳನ್ನ ಬೇಸಿಗೆಯಲ್ಲಿ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಅನುಸರಿಸಬೇಕು ಎಂದು ಸೂಚಿಸಿದ್ದಾರೆ.

6) ನಿಂಬೆ ರಸದೊಂದಿಗೆ ಕೆಂಪು ಮೆಣಸು ಅಥವಾ ಸುಣ್ಣದ ಪುಡಿಯನ್ನು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಿದರೆ ಹಾವುಗಳು ಮನೆಯ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗಿದೆ.

5) ಹಾವುಗಳು ಮನೆಯ ಹತ್ತಿರ ಬರದಂತೆ ತಡೆಯಲು ವಿನೆಗರ್ ಮತ್ತು ಸೀಮೆ ಎಣ್ಣೆಯನ್ನು ಬಳಸಬಹುದು. ಇದರ ಪರಿಮಳಕ್ಕೆ ಹಾವುಗಳು ಎಲ್ಲೇ ಅವಿತುಕೊಂಡಿದ್ದರೂ ಕೂಡ ಓಡಿಹೋಗುತ್ತವೆ.

4) ಮನೆಯ ಹಾಸುಪಾಸಿಗೆ ಫಿನೈಲ್ ಸಿಂಪಡಿಸಿದರೆ, ಇದರ ಗಾಢವಾದ ವಾಸನೆಗೆ ಹಾವುಗಳು ಓಡಿ ಹೋಗುತ್ತವೆ.

3) ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಮನೆಯ ಸುತ್ತಮುತ್ತಲಿನ ಹಾಕಬೇಕು.

2) ಮನೆಯ ಸುತ್ತ-ಮುತ್ತ ಬೆಳ್ಳುಳ್ಳಿ ಪುಡಿಯನ್ನು ಚೆಲ್ಲುವುದು ಒಳ್ಳೆಯದು.

1) ಕೊಳೆತಿರುವ ಈರುಳ್ಳಿಯನ್ನು ಮನೆಯ ಸುತ್ತಲೂ ಚೆಲ್ಲುವುದರಿಂದಲೂ ವಿಷಕಾರಿ ಹಾವುಗಳು ಬರದಂತೆ ತಡೆಯಬಹುದು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net