ನೈಸ್​ ರಸ್ತೆಯಲ್ಲಿ ಹೊತ್ತಿ ಉರಿದ ಕೆಮಿಕಲ್​ ಟ್ಯಾಂಕರ್

ಕಾರಿಗೆ ಡಿಕ್ಕಿಯಾಗಿ ಟ್ಯಾಂಕರ್ ಪಲ್ಟಿ, ನೈಸ್ ರಸ್ತೆಯಲ್ಲಿ ದಟ್ಟ ಹೊಗೆ, ನೈಸ್ ರಸ್ತೆಯಲ್ಲಿ ದಟ್ಟ ಹೊಗೆ
Nice road
Nice road
Published on: 

ಬೆಂಗಳೂರು: ನೈಸ್ ರಸ್ತೆಯಲ್ಲಿ ಅಪಾಯಕಾರಿ ರಾಸಾಯನಿಕ ವಸ್ತು ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯ ಟೈರ್ ಸ್ಫೋಟಗೊಂಡು ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಭೀಕರ ಅಗ್ನಿ ಅವಘಡ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಅಪಘಾತದ ರಭಸಕ್ಕೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಕ್ಷಣಗಳಲ್ಲಿ ಇಡೀ ವಾಹನ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿತ್ತು.ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಚೆನ್ನೈನಿಂದ ಮುಂಬೈಗೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್, ನೈಸ್ ರಸ್ತೆಯ ಕನಕಪುರ ರಸ್ತೆ ಟೋಲ್ ದಾಟಿ ಅಂಜನಾಪುರ ಕಡೆಗೆ ತೆರಳುತ್ತಿದ್ದಾಗ ಈ ದುರಂತ ನಡೆದಿದೆ. ಟ್ಯಾಂಕರ್‌ನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್, ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ರಸ್ತೆಯ ಮಧ್ಯದಲ್ಲೇ ಉರುಳಿ ಬಿದ್ದಿದೆ. ಈ ವೇಳೆ ರಾಸಾಯನಿಕ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ.

ಟ್ಯಾಂಕರ್‌ನಲ್ಲಿ ನಾಲ್ಕರಿಂದ ಐದು ಪ್ರತ್ಯೇಕ ವಿಭಾಗಗಳಿದ್ದವು. ಈ ಪೈಕಿ ಎರಡು ವಿಭಾಗಗಳು ಬೆಂಕಿಗೆ ಆಹುತಿಯಾಗಿವೆ. ರಾಸಾಯನಿಕ ತುಂಬಿದ್ದ ಡ್ರಮ್‌ಗಳು ಸಿಡಿದು ಭಾರೀ ಶಬ್ದ ಕೇಳಿಬಂದಿದೆ. ಟ್ಯಾಂಕರನ ಉಳಿದ ವಿಭಾಗಗಳಲ್ಲಿ ರಾಸಾಯನಿಕ ಇದ್ದುದರಿಂದ ಬೆಂಕಿ ಮತ್ತಷ್ಟು ವ್ಯಾಪಿಸಿದರೆ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸುವ ಅಪಾಯ ಎದುರಾಗುತ್ತಿತ್ತು ಎನ್ನಲಾಗಿದೆ.

ಬೆಂಕಿಯ ತೀವ್ರತೆ ಹಾಗೂ ದಟ್ಟ ಹೊಗೆಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

5 ಕಿ.ಮೀ.ಟ್ರಾಫಿಕ್ ಜಾಮ್

ನೈಸ್ ರಸ್ತೆಯಲ್ಲಿ ಅಂದಾಜು 5 ಕಿ.ಮೀ. ವರೆಗೂ ಸಂಚಾರದಟ್ಟಣೆ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಕಿ ನಂದಿಸಲು ಹರಸಾಹಸ

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ತಲಘಟ್ಟಪುರ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ಕೈಗೊಂಡರು. 2 ಗಂಟೆಗೂ ಹೆಚ್ಚು ಕಾಲ ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು. ಟ್ಯಾಂಕರ್‌ನಲ್ಲಿದ್ದ ಉಳಿದ ರಾಸಾಯನಿಕ ಚೇಂಬರ್‌ಗಳಿಗೆ ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮುಂಬೈ ಮೂಲದ ಖಾಸಗಿ ರಾಸಾಯನಿಕ ಕಂಪನಿಗೆ ಸೇರಿದ ಟ್ಯಾಂಕರ್ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಗಂಟೆಗಳ ಬಳಿಕ ಲಾರಿಯನ್ನು ನೈಸ್ ರಸ್ತೆಯಿಂದ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net