ಪ್ಲೇಸ್‌ಮೆಂಟ್ ಸೋಗಲ್ಲಿ ವಿದ್ಯಾರ್ಥಿಗಳಿಗೆ ವಂಚನೆ

Social Media Cheating
Published on

ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜು ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಸೃಷ್ಟಿಸಿ ನೌಕರಿ ಕೊಡಿಸುವ ಆಮಿಷವೊಡ್ಡಿ 70 ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ವೈಟ್‌ಫೀಲ್ಡ್‌ನ ಖಾಸಗಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರು ಈ ಕುರಿತು ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಕಾಲೇಜು ಹೆಸರನ್ನ ಬಳಸಿಕೊಂಡು ಅಪರಿಚಿತ ವ್ಯಕ್ತಿಗಳು ‘ಆಲ್ ಬ್ರಾಂಚ್ ಅನ್ ಅಫೀಯಲ್ 2024-28’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಸೃಷ್ಟಿಸಿದ್ದರು. ಈ ಗ್ರೂಪ್‌ಗೆ ಕಾಲೇಜಿನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅವರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಪ್ಲೇಸ್‌ಮೆಂಟ್ ಕೊಡಿಸುವುದಾಗಿ ಆನ್‌ಲೈನ್ ಮೀಟಿಂಗ್ ಮಾಡಿದ್ದರು.

ಇದಾದ ಮೇಲೆ ಅ. 6ರಂದು 70 ವಿದ್ಯಾರ್ಥಿಗಳಿಂದ ತಲಾ 3,004 ರೂ. ಆನ್‌ಲೈನ್ ಮೂಲಕ ವಸೂಲಿ ಮಾಡಿದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಪ್ರಾಂಶುಪಾಲರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net