

ಮುಂಬೈ: ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಇಬ್ಬರೂ ಇದೀಗ ವಂಚನೆ ಆರೋಪಕ್ಕೀಡಾಗಿದ್ದಾರೆ. ಅವರ ಫೇಮ್ಗೇ ಧಕ್ಕೆ ತರುವಂಥ ಆರೋಪಕ್ಕೆ ಕಾರಣವಾಗಿದ್ದು ಗೋಲ್ಡ್ ಸ್ಕೀಮ್. ಚಿನ್ನದ ವಿಷಯದಲ್ಲಿ ಹೀಗೊಂದು ಆರೋಪ ಮಾಡಿರುವವರು ಸಚಿನ್.
ಶಿಲ್ಪಾ ಶೆಟ್ಟಿ - ರಾಜ್ ಕುಂದ್ರಾ ದಂಪತಿ ಮಾಲೀಕತ್ವದಲ್ಲಿದ್ದ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ನಲ್ಲಿ ಎನ್ಆರ್ಐ ಸಚಿನ್ ಜೋಶಿ ಎಂಬುವವರು ಚಿನ್ನ ಖರೀದಿಸಿದ್ದು, ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಶಿಲ್ಪಾ-ರಾಜ್ ವಿರುದ್ಧ ವಂಚನೆ ದೂರು ನೀಡಿದ್ದಾರೆ.
2014ರ ಮಾರ್ಚ್ನಲ್ಲಿ ಸಚಿನ್ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ನಿಂದ 18.58 ಲಕ್ಷ ರೂ. ಮೊತ್ತದಲ್ಲಿ 1 ಕೆ.ಜಿ. ಚಿನ್ನ ಖರೀದಿಸಿದ್ದೆ. ಐದು ವರ್ಷದ ಈ ಯೋಜನೆಯಡಿ ಖರೀದಿಸುವ ಚಿನ್ನಕ್ಕೆ ಒಂದು ಗೋಲ್ಡ್ ಕಾರ್ಡ್ ನೀಡಲಾಗುತ್ತಿದೆ. ಅವಧಿ ಮುಗಿದ ಬಳಿಕ ಇದರ ಜತೆಗೆ ನಿಗದಿತ ಮೊತ್ತದ ಚಿನ್ನ ಕೊಡಲಾಗುತ್ತದೆ. 2019ರ ಮಾ. 25ಕ್ಕೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಾಂದ್ರಾ ಕುರ್ಲಾದಲ್ಲಿದ್ದ ಕಂಪನಿ ಕಚೇರಿಗೆ ತೆರಳಿದ್ದಾಗ, ಅದರ ಬಾಗಿಲೆಳೆದಿತ್ತು ಎಂದು ಸಚಿನ್ ಆರೋಪಿಸಿದ್ದಾರೆ. ಮತ್ತೊಂದೆಡೆ ಶಿಲ್ಪಾ ಈ ಕಂಪನಿಗೆ 2016ರಲ್ಲಿ ರಾಜೀನಾಮೆ ನೀಡಿದ್ದು, ರಾಜ್ ಕುಂದ್ರಾ 2017ರಲ್ಲಿ ರಿಸೈನ್ ಮಾಡಿದ್ದಾರೆ ಎನ್ನಲಾಗಿದೆ.
ಸತ್ಯುಗ್ ಕುರಿತ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಶಿಲ್ಪಾ ಶೆಟ್ಟಿ, ಸತ್ಯ ಏನು ಎಂಬುದು ಸದ್ಯದಲ್ಲೇ ಹೊರ ಬರಲಿದೆ ಎಂದಿದ್ದಾರೆ. ಸಚಿನ್ ಮಾಡಿರುವ ಆರೋಪ ಸುಳ್ಳು ಹಾಗೂ ಆಧಾರರಹಿತ. ಸತ್ಯುಗ್ ಗೋಲ್ಡ್ ತನ್ನ ಗ್ರಾಹಕರಿಗೆ ಸಮಯೋಚಿತ ಸೇವೆ ನೀಡುತ್ತಿದೆ. ಒಂದು ಕೆ.ಜಿ. ಚಿನ್ನದ ಬಾಬ್ತು ಸಚಿನ್ ಜೋಶಿ ವಿಳಂಬ ಶುಲ್ಕ ಸೇರಿ ಇನ್ನೂ ಹಣ ನೀಡಬೇಕಿದೆ ಎಂದಿದ್ದಾರೆ ಮಿಸೆಸ್ ಕುಂದ್ರಾ.
ಡಿಫಾಲ್ಟರ್ಗಳಿಂದ ಸರಣಿ ಚೆಕ್ಬೌನ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ನಾವು ಕೋರ್ಟ್ಗೆ ಹೋಗಿರುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ನಮ್ಮಲ್ಲಿ ಅವರಿಗೆ ಕೊಡಲು ಚಿನ್ನ ಇರದಿದ್ದರೆ ನಾವು ಅದನ್ನು ಕೋರ್ಟ್ನಲ್ಲಿ ಇಟ್ಟಿರುತ್ತಿರಲಿಲ್ಲ. ವಿಷಯ ನ್ಯಾಯಾಲಯದಲ್ಲಿದ್ದು, ಶೀಘ್ರವೇ ಸತ್ಯ ಹೊರಬರಲಿದೆ ಎಂದು ಶಿಲ್ಪಾ ಹೇಳಿದ್ದಾರೆ. (ಏಜೆನ್ಸೀಸ್)