ಮಹಿಳೆಯಿಂದ ವೈದ್ಯನಿಗೆ ವಂಚನೆ: ವಂಚಕಿ ವಿರುದ್ದ ಎಫ್‌ಐಆರ್ ದಾಖಲು

Crime Logo
Published on

ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಬಂದಿದ್ದ ವೇಳೆ ಪರಿಚಿತಳಾಗಿದ್ದ ಮಹಿಳೆಯ ಮಾತು ನಂಬಿ ಐಷಾರಾಮಿ ಕಾರಿಗೆ ಆಸೆಪಟ್ಟ ವೈದ್ಯನೊಬ್ಬ ಕೋಟ್ಯಂತರ ರೂ.ಹಣ ಕಳೆದುಕೊಂಡಿದ್ದಾರೆ.


ವಿಜಯನಗರದ ನಿವಾಸಿಯಾದ ಡಾ.ಗಿರೀಶ್ ಎಂಬುವವರಿಗೆ ಐಷಾರಾಮಿ ಕಾರು ಕೊಡಿಸುವುದಾಗಿ ನಂಬಿಸಿದ್ದ ಐಶ್ವರ್ಯ ಗೌಡ ಎಂಬಾಕೆ ಬರೋಬ್ಬರಿ ೬.೨೦ ಕೋಟಿ ರೂ. ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


೨೦೨೨ ರ ಮಾರ್ಚ್‌ನಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಡಾ.ಗಿರೀಶ್ ಅವರ ಆಸ್ಪತ್ರೆಗೆ ರಾಜರಾಜೇಶ್ವರಿ ನಗರದ ನಿವಾಸಿಯಾದ ಐಶ್ವರ್ಯ ಗೌಡ(೩೨) ಬಂದಾಗ ಅವರ ಪರಿಚಯವಾಗಿದೆ. ನಂತರದ ದಿನಗಳಲ್ಲಿ ತಾನು ರಿಯಲ್ ಎಸ್ಟೇಟ್ ಫೈನಾನ್ಸ್ ವ್ಯವಹಾರದ ಜತೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರವನ್ನು ಸಹ ನಡೆಸುತ್ತಿದ್ದೇನೆ ಎಂದು ಐಶ್ವರ್ಯ ಗೌಡ ತಿಳಿಸಿದ್ದಳು. ಐಶಾರಾಮಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದ ಗಿರೀಶ್, ಐಶ್ವರ್ಯ ಗೌಡ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಕಡಿಮೆ ಬೆಲೆಗೆ ಕಾರು ಕೊಡಿಸುವುದಾಗಿ ನಂಬಿಸಿದ್ದ ಆಕೆ ೨.೭೫ ಕೋಟಿ ರೂ.ಗಳನ್ನು ಆನ್‌ಲೈನ್ ಆರ್‌ಟಿಜಿಎಸ್ ಮೂಲಕ ೩.೨೫ ಕೋಟಿ ರೂ.ಗಳನ್ನು ನಗದಾಗಿ ಪಡೆದುಕೊಂಡಿದ್ದಳು. ಆದರೆ ಕಾರನ್ನು ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ ಇವತ್ತು ನಾಳೆ ಕೊಡುವುದಾಗಿ ಸಬೂಬು ಹೇಳಿದ್ದಳು. ಕಳೆದ ಡಿಸೆಂಬರ್‌ನಲ್ಲಿ ಹಣ ಹಿಂದಿರುಗಿಸುವಂತೆ ಕೇಳಿದಾಗ ವಿಜಯನಗರ ಕ್ಲಬ್ ಹತ್ತಿರ ಬರಲು ಸೂಚಿಸಿದ್ದಾಳೆ. ಅದರಂತೆ ಗಿರೀಶ್ ಮತ್ತು ಅವರ ಪತ್ನಿ ಕ್ಲಬ್ ಹತ್ತಿರ ಹೋದಾಗ, ಅವಾಚ್ಯವಾಗಿ ನಿಂದಿಸಿ, ಇದೇ ರೀತಿ ಹಣ ವಾಪಸ್ ಕೇಳಿದರೆ ನಿನ್ನ ವಿರುದ್ಧ ಅತ್ಯಾಚಾರದ ಸುಳ್ಳು ದೂರು ಕೊಡುತ್ತೇನೆ ಎಂದು ಬೆದರಿಸಿದ್ದಾಳೆ. ಅಲ್ಲದೆ ಈ ವಿಷಯವನ್ನು ಕೈ ಬಿಡಬೇಕಾದರೆ ಮತ್ತೆ ೫ ಲಕ್ಷ ರೂ. ಹಣವನ್ನು ನೀಡುವಂತೆ ಬೆದರಿಕೆ ಹಾಕಿ ಪುನಃ ೨ ಲಕ್ಷ ರೂ. ಸುಲಿಗೆ ಮಾಡಿದ್ದಾಳೆ ಎಂದು ದೂರುದಾರ ಗಿರೀಶ್ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net