

ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಈಗ ಕೇವಲ ಒಂದು ವರ್ಷ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಈಗಿನಿಂದಲೇ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದು, ಗೆಲುವಿನ ಸೂತ್ರಗಳ ಶೋಧದಲ್ಲಿ ತೊಡಗಿವೆ. ಹೀಗಿರುವಾಗ ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ಹಲವು ವಿವಾದಗಳಲ್ಲಿ ಸಿಲುಕೊಂಡಿರುವುದು ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಸಿಕ್ಕಂತಾಗಿದೆ. ಕಮಿಷನ್ (ಭ್ರಷ್ಟಾಚಾರ) ವಿವಾದ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಯಾಗಿದೆ. ಅದರ ಬೆನ್ನಲ್ಲೇ ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ಹೊಸ ತಿರುವುಗಳನ್ನು ಪಡೆಯುತ್ತ, ವಿವಿಧ ಜಾಲಗಳ ಮುಖವಾಡವನ್ನು ಅನಾವರಣಗೊಳಿಸುತ್ತಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀೆ ಬಗ್ಗೆಯೂ ಅಪಸ್ವರ ಎದ್ದಿದೆ. ಇಷ್ಟು ಮಾತ್ರವಲ್ಲ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯಾವುದೇ ನೇಮಕಾತಿಗಳು ಗೊಂದಲ, ಅವ್ಯವಹಾರಗಳಿಂದ ಹೊರತಾಗಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಇದಲ್ಲದೆ, ಸಚಿವ ಸ್ಥಾನಕ್ಕಾಗಿ ಲಾಬಿ, ಹಲವು ಸಚಿವರು, ಶಾಸಕರ ನಿಷ್ಕ್ರಿಯತೆ ಸೇರಿದಂತೆ ಹಲವು ಸಮಸ್ಯೆಗಳು ಆಳುವ ಪಕ್ಷ$ವನ್ನು ಕಾಡುತ್ತಿವೆ. ಚುನಾವಣೆಗೆ ಸಜ್ಜಾಗಲು ಉತ್ಸಾಹದಲ್ಲಿ ಹೊರಟವರಿಗೆ ಈ ಎಲ್ಲ ಪ್ರತಿಕೂಲ ಬೆಳವಣಿಗೆಗಳು ಅಡ್ಡಿಯಾಗಿ ಪರಿಣಮಿಸಿರುವುದಂತೂ ಹೌದು.
ಇನ್ನು, ಉಳಿದ ಅಲ್ಪ ಅವಧಿಯಲ್ಲಾದರೂ ಸರ್ಕಾರದ ವರ್ಚಸ್ಸು ಹೆಚ್ಚಿಸಬೇಕು ಎಂಬ ಪ್ರಯತ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೊಡಗಿಸಿಕೊಂಡಿದ್ದಾರೆ. ಸಮತೋಲಿತ ಬಜೆಟ್ ಮಂಡಿಸಿದ್ದ ಅವರು, ಈಗ ಬಜೆಟ್ ಘೋಷಣೆಗಳ ಅನುಷ್ಠಾನದತ್ತ ಗಮನ ಹರಿಸಿದ್ದಾರೆ.
ಮುಂಗಡಪತ್ರದಲ್ಲಿ ಘೋಷಿಸಿದ ಯೋಜನೆಗಳ ತ್ವರಿತ ಅನುಷ್ಠಾನದ ನಿಟ್ಟಿನಲ್ಲಿ ವಿವಿಧ ಇಲಾಖೆಗಳೊಂದಿಗೆ ಸರಣಿ ಸಭೆ ನಡೆಸುತ್ತಿದ್ದಾರೆ. ವೈದ್ಯಕಿಯ ಶಿಕ್ಷಣ, ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಜಲಜೀವನ್ ಮಿಷನ್ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮೊದಲ ಆದ್ಯತೆ ನೀಡಿದ್ದಾರೆ. ಆಯಾ ಇಲಾಖೆಯಲ್ಲಿ ತುರ್ತು ಅಗತ್ಯದ, ಮಾಡಲೇಬೇಕಾದ ಕೆಲಸ&ಕಾರ್ಯಗಳನ್ನು ಪಟ್ಟಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿ, ಅನುಷ್ಠಾನಕ್ಕೆ ಮುಖ್ಯಮಂತ್ರಿ ಕಾಲಮಿತಿ ಗೊತ್ತುಪಡಿಸಿದ್ದಾರೆ. ಜತೆಗೆ ಪ್ರತಿಯೊಂದು ಹಂತದಲ್ಲಿ ದಕ್ಷತೆ, ಪಾರದರ್ಶಕತೆ ಬಗ್ಗೆ ಪುನರುಚ್ಚರಿಸಿದ್ದಾರೆ. ಎರಡನೇ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ತಲಾ ಒಂದು ದಿನ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿರುವುದು ಗಮನಾರ್ಹ.
ಬಜೆಟ್ನ ಘೋಷಣೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಬಳಿ ಸಮಯ ಕಡಿಮೆ ಇದೆ. ಪ್ರಮುಖ ಘೋಷಣೆಗಳನ್ನು, ಯೋಜನೆಗಳನ್ನು ಪೂರ್ಣಗೊಳಿಸದಿದ್ದರೆ ಸರ್ಕಾರದ ವಿಶ್ವಾಸಾರ್ಹತೆ ಬಗ್ಗೆಯೂ ಪ್ರಶ್ನೆ ಮೂಡುತ್ತದೆ; ವರ್ಚಸ್ಸಿಗೂ ಧಕ್ಕೆ. ಹಾಗಾಗಿಯೇ, ಮುಖ್ಯಮಂತ್ರಿಗಳೇ ಬಜೆಟ್ ಘೋಷಣೆ ಅನುಷ್ಠಾನದ ನಿಟ್ಟಿನಲ್ಲಿ ಉತ್ಸಾಹ ತೋರಿರುವುದು ಒಳ್ಳೆಯ ಬೆಳವಣಿಗೆ. ಸಚಿವರು ಕೂಡ ಅವರವರ ಇಲಾಖೆ ಸಂಬಂಧಿತ ಘೋಷಣೆಗಳನ್ನು ಕಾರ್ಯಗತಗೊಳಿಸಲು ಇದೇ ಕಾಳಜಿ ತೋರಿದರೆ ಉತ್ತಮ. ಜನರು ಮತಗಳನ್ನು ನೀಡುವುದು ಅಭಿವೃದ್ಧಿಯ ಆಧಾರದ ಮೇಲೆಯೇ ಎಂಬುದನ್ನು ರಾಜಕೀಯ ಪಕ್ಷಗಳು ಮರೆಯುವಂತಿಲ್ಲ.