ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರ ಬದುಕಿನಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಕನ್ನಡದಲ್ಲಿ ‘ಚಾರ್ಜ್‌ಶೀಟ್ 03-08’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಚಿತ್ರದಲ್ಲಿ ಅಭಿನಯಿಸುವ ಜತೆಗೆ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹಿರಿಯ ನಟ ಸುಂದರ್ ರಾಜ್, ಹರ್ಷ ಅರ್ಜನ್, ಸತ್ಯಶ್ರೀ, ಅಮರ್, ರೂಪೇಶ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ ಕಲಾ ಬಳಗದಲ್ಲಿದ್ದಾರೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೆ ಸೆನ್ಸಾರ್ ಕೂಡ ಆಗಿದೆ. ಈ ಕ್ರೈಂ-ಥ್ರಿಲ್ಲರ್ ಜಾನರ್ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ. ಸೆನ್ಸಾರ್ ಆದ ಬೆನ್ನಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ‘ಚಿತ್ರದ ಆಡಿಯೋ ಹಕ್ಕುಗಳು ಕೂಡ ಉತ್ತಮ ಮೊತ್ತಕ್ಕೆ ಮಾರಾಟ ಆಗಿದೆ. ಇದೀಗ ಸೆನ್ಸಾರ್ ಕೂಡ ಪೂರ್ಣಗೊಂಡಿದ್ದು, ಪ್ರಚಾರ ಕಾರ್ಯಗಳು ಆರಂಭಿಸಲಿದ್ದೇವೆ. ಮೊದಲು ಟೀಸರ್, ನಂತರ ಎರಡು ಹಾಡುಗಳು, ಕೊನೆಗೆ ಟ್ರೈಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಕರ್ನಾಟಕ ಸೇರಿ ಚೆನ್ನೈ, ಮುಂಬೈ, ದೇಶದ ಪ್ರಮುಖ ಮಹಾನಗರಗಳಲ್ಲಿ ಚಿತ್ರದ ಪ್ರಚಾರ ನಡೆಸಲಿದ್ದೇವೆ’ ಎಂದು ವೆಂಕಟ್ ಭಾರದ್ವಾಜ್ ಮಾಹಿತಿ ನೀಡುತ್ತಾರೆ. ಸಮೀರ್ ಕುಲಕರ್ಣಿ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಶಮೀಕ್ ವಿ.ಭಾರದ್ವಾಜ್ ಸಂಕಲನ ಚಿತ್ರಕ್ಕಿದೆ.