ಐಷಾರಾಮಿ ಕಾರು ತೆರಿಗೆ ವಂಚನೆ ಆರೋಪ; ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರ್ ಮನೆ ಮೇಲೆ ದಾಳಿ| Numkhor operation

Untitled design (87)
Published on

Numkhor operation: ಐಷಾರಾಮಿ ಕಾರು ತೆರಿಗೆ ವಂಚನೆಯ ವಿರುದ್ಧ ದೇಶಾದ್ಯಂತ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಮ್ಖೋರ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಅದರ ಭಾಗವಾಗಿ ಕೇರಳದಲ್ಲಿ ನಟರಾದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮನೆ ಮೇಲೆ ಮಂಗಳವಾರ (ಸೆ. 23) ದಾಳಿ ಮಾಡಿ ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

ನಮ್ಖೋರ್ ಕಾರ್ಯಾಚರಣೆಯು ಕೇಳದ ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂ, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಾದ್ಯಂತ 30 ಸ್ಥಳಗಳಲ್ಲಿ ಉನ್ನತ ಮಟ್ಟದ ತಪಾಸಣೆ ನಡೆಯುತ್ತಿದೆ. ಅದರಲ್ಲಿ ನಟರಾದ ಪೃಥ್ವಿರಾಜ್ ಮತ್ತು ದುಲ್ಕರ್ ಸಲ್ಮಾನ್ ಅವರ ನಿವಾಸಗಳು ಸೇರಿವೆ. ಆದರೆ ನಟರ ಮನೆಯಲ್ಲಿ ಯಾವುದೇ ಐಷಾರಾಮಿ ವಾಹನಗಳು ಅಧಿಕಾರಿಗಳಿಗೆ ಸಿಕ್ಕಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

ನಮ್ಖೋರ್ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ತೆರಿಗೆ ವಂಚಿಸಿ ಎಂಟು ವಿಧದ ಉನ್ನತ ದರ್ಜೆಯ ವಾಹನಗಳನ್ನು ಭೂತಾನ್ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕಂಡು ಬಂದಿದೆ. ಮೊದಲು ಹಿಮಾಚಲ ಪ್ರದೇಶದಲ್ಲಿ ನೋಂದಾಯಿಸಿ, ನಂತರ ಅವುಗಳನ್ನು ಭಾರತದ ವಿವಿಧ ಭಾಗಗಳಿಗೆ ಸಾಗಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮೊದಲು ಐಷರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ಬಳಿಕ ಮಾಲೀಕರಿಗೆ  ನೋಟಿಸ್ ನೀಡಿ, ವಾಹನಗಳ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಲು ಕೇಳಲಾಗುತ್ತದೆ. ಈವರೆಗೆ 11 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಪಾಸಣೆಯಲ್ಲಿ ಉನ್ನತ ವ್ಯಕ್ತಿಗಳ ಮನೆಗಳು ಗಮನ ಸೆಳೆದಿದ್ದರೂ, ಕಾರ್ಯಾಚರಣೆಯು ವ್ಯವಸ್ಥಿತವಾಗಿದೆ ಮತ್ತು ತೆರಿಗೆ ವಂಚನೆಯ ಶಂಕಿತ ಶೋರೂಮ್‌ಗಳು ಮತ್ತು ವೈಯಕ್ತಿಕ ಆಮದುದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net