

ಬೆಂಗಳೂರು: ದೇವರಾಜ ಅರಸು ಇಂದಿರಾಗಾಂಧಿಯವರ ನೇತೃತ್ವದಲ್ಲಿ 20 ಅಂಶಗಳ ಕಾರ್ಯಕ್ರಮ ಮೂಲಕ ಬಡತನ ನಿರ್ಮೂಲನೆಗೆ ಅಡಿಪಾಯ ಹಾಕಿದರು. ಈ ಕಾರಣದಿಂದ ನಮ್ಮ ರಾಜ್ಯ ಪ್ರಗತಿ ಹೊಂದಿದ ರಾಜ್ಯವಾಗುತ್ತಿದೆ. ಸಾಧನೆಗಳು ಬಿಜೆಪಿ ಕಾಲದಲ್ಲಿ ಆಗಿಲ್ಲ. ಕಾಂಗ್ರೆಸ್ ಕಾಲದಲ್ಲಿ ಈ ದೇಶ ಕಟ್ಟುವ ಕೆಲಸ ಆಗಿದೆ. ಈಗಲೂ ಆಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಮೋದಿಯವರ ನೇತೃತ್ವದ ಬಿಜೆಪಿ ಕೇವಲ ಸುಳ್ಳು, ಭ್ರಮೆಗಳಲ್ಲೆ ರಾಜಕೀಯ ಮಾಡುತ್ತಿದೆ. ಬಿಜೆಪಿ ಭ್ರಮೆಗಳನ್ನು ಸೃಷ್ಟಿ ಮಾಡಿ ಜನರ ಗಮನವ ಬೇರೆಡೆ ಸೆಳೆದು ದಾರಿತಪ್ಪಸಿಸಲಾಗುತ್ತಿದೆ. ಭ್ರಮೆಗಳು ತುಂಬಾ ಅಪಾಯಕಾರಿ. 10 ವರ್ಷಗಳ ವೈಫಲ್ಯಗಳನ್ನು ಮರೆಮಾಚಲು ಅನೇಕ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಭಾರತೀಯರ ಬದುಕಿನ ಸುಧಾರಣೆಗೆ ಬಿಜೆಪಿ ಏನಾದರೂ ಕೊಡುಗೆ ಕೊಟ್ಟಿದೆಯೇ? 2014 ರಲ್ಲಿ 453 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1300ಕ್ಕೆ ಏರಿಕೆಯಾಗಿದೆ. ಬಡವರ, ಮಧ್ಯಮ ವರ್ಗದವರ ಸ್ಥಿತಿ ಕೆಳಕ್ಕೆ ಬಿದ್ದಿದೆ. ಇದಕ್ಕೆ ಮೋದಿ ಸರ್ಕಾರ ಒಂದೇ ಒಂದು ಕಾರ್ಯಕ್ರಮ ರೂಪಿಸಿಲ್ಲ ಎಂದರು.
ಈ ಹಿಂದೆ ಪ್ರಧಾನಿಯಾಗಿದ್ದವರು ದೇಶದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡುತ್ತಿದ್ದರು, ಮಾತನಾಡುತ್ತಿದ್ದರು. ಆದರೆ ಮೋದಿಯವರು ಸಾರ್ವಜನಿಕ ಸಭೆಗಳಲ್ಲಿ ಮಾತ್ರ ಮಾತನಾಡುತ್ತಾರೆ. ಪೆಟ್ರೋಲ್ ಬೆಲೆ 102ಕ್ಕೆ ಏರಿಕೆಯಾದಾಗ ಎಲ್ಲಿ ಹೋಗಿದ್ದರು ಮೋದಿಯವರು ಎಂದು ಪ್ರಶ್ನಿಸಿದರು.
2024ರಲ್ಲಿ ಬಿಜೆಪಿ ಕೊಟ್ಟಿರುವ ಭರವಸೆಗಳು ಸುಳ್ಳಿನ ಭರವಸೆಗಳು. ಕಳೆದ 10 ವರ್ಷಗಳಲ್ಲಿ ಏನೂ ಮಾಡಲಿಲ್ಲ. ಮೋದಿಯವರಿಗೆೆ ಜನರ ಕಷ್ಟಗಳನ್ನು ಬಗೆಹರಿಸುವ ಹಂಬಲ ಇದೆಯೇ? ಬಿಜೆಪಿಯ ನಾಯಕರಿಗೆ ದಿನದ 24 ಗಂಟೆಯೂ ಮೋದಿಯವರ ಜಪ ಮಾಡುವುದೇ ಕೆಲಸ ಎಂದು ಕುಟುಕಿದರು.