

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಇದು ಐತಿಹಾಸಿಕ ಸಭೆ ಆಗಿತ್ತು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆ ಎಂದು ದೂರಿದರು.
ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಜನ ಕಾರ್ಯಕ್ರಮಕ್ಕೆ ಬರಬಾರದೆ? ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಒಂದು ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ. ಶುಕ್ರವಾರ ನಮ್ಮ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಇದಕ್ಕೆಲ್ಲ ನಾವು ಹೆದರುವ ಪ್ರಶ್ನೆ ಇಲ್ಲ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ ಎಂದು ಗುಡುಗಿದರು.
ಸರ್ಕಾರ ಈ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ನೊಟೀಸ್ ನೀಡಿದೆ. ಸಿಎಂ, ಡಿಸಿಎಂ ಆದಿಯಾಗಿ ಅವರ ಕಡೆಯಿಂದ ಎಲ್ಲರೂ ಚನ್ನಪಟ್ಟಣಕ್ಕೆ ಹೋಗಿದ್ದರಲ್ಲವೇ? ಹಾಗಿದ್ದರೆ ಅವರ ಸಭೆಗಳಿಗೆ ಬಂದ ಜನರಿಗೆ ವಾಹನದ ವ್ಯವಸ್ಥೆ ಮಾಡೇ ಇರಲಿಲ್ಲವೇ? ಎಂದು ಪ್ರ್ರಶ್ನಿಸಿದರು.
ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಸೇರಿದಂತೆ ಮೂರೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ನಾವು ಮೂರೂ ಕ್ಷೇತ್ರ ಗೆದ್ದಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಭಾವನಾತ್ಮಕ ಮಾತು ಮತ್ತು ಕಣ್ಣೀರು ಜನರಿಗೆ ಬೇಸರವಾಗಿ ಹೋಗಿದೆ ಅಂದಿದ್ದಾರೆ. ಇವರು ಎಂದೂ ಜನರ ಮುಂದೆ ಕಣ್ಣೀರೇ ಹಾಕಿಲ್ಲವೇ? ಹೌದು, ನಾನು ಜನರ ಕಷ್ಟ ನೋಡಿ ಕಣ್ಣೀರು ಹಾಕ್ತಿದ್ದೇನೆ. ಇವರು ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಎಂದು ಬೀಗುತ್ತಿದ್ದಾರೆ. ಇವರಿಗೆ ಚನ್ನಪಟ್ಟಣದಲ್ಲಿ ನಿಲ್ಲಿಸೋಕೆ ಕಾಂಗ್ರೆಸ್‌ನಿಂದ ಒಬ್ಬ ಅಭ್ಯರ್ಥಿ ಸಿಗಲಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ, ಇಷ್ಟಾದರೂ ಕುತಂತ್ರ ಬೇರೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತಾರಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ನಾಲ್ಕು ತಿಂಗಳ ನನ್ನ ಟಿಪಿ ನೋಡಿದ್ದೀರಾ? ನನ್ನ ಇಲಾಖೆಗೆ ಸಂಬಂಧಿಸಿ ಹಲವು ರಾಜ್ಯಗಳಿಗೆ ಹೋಗಿದ್ದೇನೆ. ದೆಹಲಿಯಲ್ಲಿ ಸಮಯ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದೇನೆ. ಇವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ಹಾಗಾದರೆ, ಕರ್ನಾಟಕಕ್ಕೆ ನಾನು ಬರಲೇಬಾರದೆ? ನನ್ನನ್ನು ಗೆಲ್ಲಿಸಿದ ಜನರ ಕಷ್ಟ ಕೇಳಲು ಬರಲೇಬಾರದೆ? ನಾನು ಕರ್ನಾಟಕಕ್ಕೆ ಬಂದರೆ ಇವರು ನಿದ್ದೆಗೆಡುತ್ತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.