ಆಫ್ಘಾನ್​​ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳೇ ಆಸರೆ! ಇದು ಕನ್ನಡಿಗರ ಹೆಮ್ಮೆ

Channapatna Toys,
Published on

ಬೆಂಗಳೂರು: ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮನ್ನಣೆ ದೊರೆತಿರುವುದು ನಿಮಗೆಲ್ಲ ತಿಳಿದೇ ಇದೆ. ಈಗಾಗಲೇ ಕರ್ನಾಟಕದ ಈ ಸಾಂಪ್ರಾದಾಯಿಕ ಕರಕುಶಲಗಳಿಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ (ಜಿಐ ಟ್ಯಾಗ್​) ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇದೇ ಗೊಂಬೆಗಳು ಇದೀಗ ನೆರೆಯ ರಾಷ್ಟ್ರ ಅಫ್ಘಾನಿಸ್ತಾನದ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿದೆ ಎಂದು ವರದಿಯಾಗಿದೆ.

ಸ್ನೇಹದ ಸಂಕೇತವಾಗಿ ಕೆಲವು ವರ್ಷಗಳ ಹಿಂದೆ ಚನ್ನಪಟ್ಟಣದ ಗೊಂಬೆಗಳನ್ನು ಭಾರತದ ವಿದೇಶಾಂಗ ಸಚಿವಾಲಯ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಇದೇ ಗೊಂಬೆಗಳು ಆಫ್ಘಾನ್​​ ಮಕ್ಕಳ ಮುಖದಲ್ಲಿ ಮಂದಹಾಸ ಹರಿಸುತ್ತಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ರಾಮನಗರ ಜಿಲ್ಲೆಯ, ಚನ್ನಪಟ್ಟಣದ ಕಲಾವಿದರು ತಮ್ಮ ಕೈಗಳಿಂದ ತಯಾರಿಸುವ ಮರದ ಗೊಂಬೆಗಳಾಗಿವೆ. ಚನ್ನಪಟ್ಟಣದಲ್ಲಿ 250ಕ್ಕೂ ಹೆಚ್ಚು ಕಾಟೇಜ್ ಘಟಕಗಳು ಮತ್ತು ಆಟಿಕೆಗಳನ್ನು ತಯಾರಿಸುವ ಸುಮಾರು 50 ಕಾರ್ಖಾನೆಗಳಿವೆ.

ಆಫ್ಘಾನಿಸ್ತಾನದಲ್ಲಿರುವ ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಮತ್ತು ಕ್ರೈಮ್ (ಯುಎನ್​ಒಡಿಸಿ) ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಆಫ್ಘಾನ್​ನಲ್ಲಿ ನೂರಾರು ಮಕ್ಕಳು ಮಾದಕ ವ್ಯಸನದಿಂದ ಪ್ರಭಾವಿತರಾಗಿದ್ದಾರೆ. ಈ ಮಕ್ಕಳಿಗಾಗಿ ಬೆಂಬಲವನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಕೊಡುಗೆಯಾಗಿ ನೀಡಿದ ಮಕ್ಕಳ ಆಟಿಕೆಗಳು ಆಫ್ಘಾನ್​ ಅನೇಕ ಮಕ್ಕಳನ್ನು ತಲುಪಿವೆ ಎಂದು ಹೇಳಿದೆ.

ಎಂಬಿ ಪಾಟೀಲ್​ ಪ್ರತಿಕ್ರಿಯೆ

ಈ ಬಗ್ಗೆ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್​ ಪ್ರತಿಕ್ರಿಯೆ ನೀಡಿದ್ದಾರೆ. ಚನ್ನಪಟ್ಟಣದ ಆಟಿಕೆಗಳು ಅಫ್ಘಾನಿಸ್ತಾನದ ಮಕ್ಕಳ ಜೀವನದ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ತಿಳಿದು ನಾನು ತುಂಬಾ ಭಾವುಕನಾಗಿದ್ದೇನೆ. ನಮ್ಮ ರಾಜ್ಯದ ಕುಶಲಕರ್ಮಿಗಳು ತಾವು ಮಾಡುವ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಇದೀಗ ಕೇಳಿಬಂದಿರುವ ಆಫ್ಘಾನ್​ ಸುದ್ದಿಯು ಪ್ರಪಂಚದಾದ್ಯಂತ ನಮ್ಮ ಕರ್ನಾಟಕದ ಕೆಲಸದ ಸಾಮರ್ಥ್ಯ ಮತ್ತು ಆಕರ್ಷಣೆಗೆ ತಾಜಾ ಸಾಕ್ಷಿಯಾಗಿದೆ. ನಮ್ಮ ಸಾಂಸ್ಕೃತಿಕ ವಿಶಿಷ್ಟ ಮತ್ತು ಪರಿಸರ ಪ್ರಜ್ಞೆಯ ಆಟಿಕೆಗಳನ್ನು ಪ್ರೀತಿಸುವ ಪುಟಾಣಿಗಳಿಗೆ ನನ್ನ ಶುಭಾಶಯಗಳು ಮತ್ತು ಉದ್ಯಮದ ಕಡೆಗೆ ತಮ್ಮ ಬದ್ಧತೆಯನ್ನು ಮುಂದುವರಿಸುವ ರಾಜ್ಯದ ಎಲ್ಲಾ ಕುಶಲಕರ್ಮಿಗಳಿಗೆ ನನ್ನ ನಮನಗಳು ಎಂದು ಹೇಳಿದ್ದಾರೆ.

MB Patil

ಮಕ್ಕಳಿಗೆ ಸಂಪೂರ್ಣ ಸುರಕ್ಷಿತ

ಸ್ವಲ್ಪ ಸಮಯದ ಹಿಂದೆ ದಂತ ಮತ್ತು ಮರದಿಂದ ಮಾಡಿದ 500ಕ್ಕೂ ಹೆಚ್ಚು ಆಟಿಕೆಗಳನ್ನು ಅಫ್ಘಾನಿಸ್ತಾನದ ಮಕ್ಕಳಿಗೆ ಕಳುಹಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಶೈಕ್ಷಣಿಕ ಮತ್ತು ಮನರಂಜನಾ ಆಟಿಕೆಗಳನ್ನು ವಿಶೇಷವಾಗಿ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿವೆ. ಈ ಆಟಿಕೆಗಳು ಭಾರತದ ಜನರಿಂದ ಅಫ್ಘಾನಿಸ್ತಾನದ ಮಕ್ಕಳಿಗೆ ತಲುಪಿದೆ. ಚನ್ನಪಟ್ಟಣದ ಆಟಿಕೆಗಳಲ್ಲಿ ಯಾವುದೇ ರೀತಿ ರಾಸಾಯನಿಕ ಬಣ್ಣವನ್ನು ಬಳಸದೇ ಇರುವುದರಿಂದ ಮತ್ತು ಚೂಪಾದ ಅಂಚುಗಳಿಲ್ಲದಿರುವುದರಿಂದ ಇದು ಮಕ್ಕಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಈ ಅಂಶಗಳನ್ನು ಪರಿಗಣಿಸಿ ಆಟಿಕೆಗಳನ್ನು ಆಯ್ಕೆ ಮಾಡಿ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ನಿರ್ದೇಶಕಿ ಶ್ರೀವಿದ್ಯಾ ಹೇಳಿದ್ದಾರೆ.

ಜಂಟಿ ಉದ್ಯಮ

ಚನ್ನಪಟ್ಟಣದಲ್ಲಿರುವ ಆಟಿಕೆಗಳ ಕ್ಲಸ್ಟರ್​ಗೆ 4.98 ಕೋಟಿ ರೂ. ಬಿಡುಗಡೆಯಾಗಿದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಉದ್ಯಮವಾಗಿದ್ದು, ಆನ್‌ಲೈನ್, ಆಫ್‌ಲೈನ್ ಮತ್ತು ಮಾರ್ಕೆಟಿಂಗ್‌ನ ಇತರ ವೇದಿಕೆಗಳ ಮೂಲಕ ಸ್ಥಳೀಯ ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತಿದ್ದೇವೆ. ಇಲ್ಲಿ ತಯಾರಾದ ಆಟಿಕೆಗಳು ಉತ್ತಮ ಗುಣಮಟ್ಟದ್ದಾಗಿದ್ದು, ಬೇರೆ ದೇಶಗಳಿಗೂ ರವಾನಿಸಬಹುದಾಗಿದೆ ಎಂದು ಶ್ರೀ ವಿದ್ಯಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net