

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಕಗ್ಗಂಟಾಗಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಸಮನ್ವಯದ ಸಮಸ್ಯೆಯಿಂದಾಗಿ ಜೆಡಿಎಸ್ ಇಕ್ಕಟ್ಟಿಗೆ ಸಿಲುಕಿದೆ.
ಸತತ ಮೂರ‌್ನಾಲ್ಕು ಸಭೆ ನಡೆದರೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೂ ಜೆಡಿಎಸ್ ನಾಯಕರು ಬಿಜೆಪಿ ಕಡೆ ಮುಖ ಮಾಡಿ ನಿಂತಿದ್ದಾರೆ.
ಈ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಎನ್‌ಡಿಎ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದು ಜೆಡಿಎಸ್ ಅಭ್ಯರ್ಥಿ ಆಯ್ಕೆಗೆ ಮಗ್ಗಲು ಮುಳ್ಳಾಗಿದೆ. ಯೋಗೇಶ್ವರ್ ಮನವೊಲಿಸದೇ ಜೆಡಿಎಸ್ ಯಾರಿಗೆ ಟಿಕೆಟ್ ಕೊಟ್ಟರೂ ಕ್ಷೇತ್ರ ಕಳೆದುಕೊಳ್ಳುವ ಆತಂಕದಲ್ಲಿದೆ. ಜೆಡಿಎಸ್ ಪ್ರತಿನಿಧಿಸಿದ್ದ ಕ್ಷೇತ್ರವನ್ನು ಯೋಗೇಶ್ವರ್‌ಗೆ ಧಾರೆ ಎರೆಯಲು ಖುದ್ದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ. ಯೋಗೇಶ್ವರ್ ಅವರಿಗೆ ಬಿಜೆಪಿಯಿಂದ ಏನಾದರೂ ಆಮಿಷ ಒಡ್ಡಿ ಬೆಂಬಲ ಪಡೆಯುವ ಪ್ರಯತ್ನದ ಕಾರಣ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.
ಇನ್ನೊಂದು ಮೂಲಗಳ ಪ್ರಕಾರ ಯೋಗೇಶ್ವರ್ ಅವರಿಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ನೀಡಿ ಸಮಾಧಾನಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ, ಈ ಆರ್‌ಗೆ ಯೋಗೇಶ್ವರ್ ಒಪ್ಪುವುದು ಕಷ್ಟ ಎನ್ನುವ ಮಾತು ಕೇಳಿ ಬರುತ್ತಿವೆ.
ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೀಟು ಕೊಟ್ಟು ಗೆಲ್ಲಿಸಿಕೊಂಡು ಬರಲಾಗಿತ್ತು. ಅದೇ ರೀತಿ ಸಿ.ಪಿ.ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸಲು ಕೂಡ ಜೆಡಿಎಸ್‌ನಲ್ಲಿ ಚಿಂತನೆ ನಡೆದಿದೆ. ಆದರೆ, ಇದಕ್ಕೆ ಯೋಗೇಶ್ವರ್ ಒಪ್ಪುವುದು ಕಷ್ಟ ಎಂದು ಹೇಳಲಾಗುತ್ತದೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಚಿಹ್ನೆ ಬದಲಿಸಿ ಕಣಕ್ಕಿಳಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಹಾಗಾಗಿ ಅವರು ಯಾರಿಗಾದರೂ ಟಿಕೆಟ್ ಕೊಡಲಿ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ನಿಖಿಲ್ ಕಣಕ್ಕಿಳಿಸಿದರೆ, ಲೋಕಸಭೆ ಮಾಜಿ ಸದಸ್ಯ ಡಿ.ಕೆ.ಸುರೇಶ್ ಪ್ರತಿಸ್ಪರ್ಧಿಯಾಗಿಸಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿದೆ. ನಿಖಿಲ್ ಬದಲು ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದರೆ ಕಾಂಗ್ರೆಸ್ ಡಿ.ಕೆ.ಸುರೇಶ್ ಬದಲು ರಘುನಂದನ್ ರಾಮಣ್ಣ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿವೆ.
ಈ ಎಲ್ಲ ಸಮೀಕರಣಗಳ ನಡುವಿನ ಗೊಂದಲಗಳಿಂದ ಜೆಡಿಎಸ್ ಟಿಕೆಟ್ ಹಂಚಿಕೆ ಮುಂದೂಡುತ್ತಲೇ ಇದೆ. ರಾಜ್ಯಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಕಷ್ಟ ಎನ್ನುವ ಕಾರಣಕ್ಕೆ ಭಾನುವಾರ ನಡೆಯಬೇಕಿದ್ದ ಜೆಡಿಎಸ್ ಕೋರ್ ಕಮಿಟಿ ಸಭೆ ಕೂಡ ರದ್ದಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳೂ ಇವೆ. ಒಟ್ಟಿನಲ್ಲಿ ಚನ್ನಪಟ್ಟಣ ಟಿಕೆಟ್ ರಾಜಕೀಯದಲ್ಲಿ ಕುತೂಹಲ ಉಳಿದುಕೊಂಡಿದೆ.