ಮುಂಜಾಗ್ರತಾ ಕ್ರಮ ಪಾಲಿಸುವಲ್ಲಿ ಜನರ ನಿರ್ಲಕ್ಷ್ಯ : ಚನ್ನಪಟ್ಟಣದಲ್ಲಿ ವಿನಾಕಾರಣ ಓಡಾಟ ಅಂಗಡಿ, ಆಸ್ಪತ್ರೆ ಮುಂದೆ ಜನಜಂಗುಳಿ

3-cpt-2pa
Published on

ಚನ್ನಪಟ್ಟಣ :  ಕರೊನಾ ಎರಡನೇ ಅಲೆ ತಾಲೂಕಿನಲ್ಲೂ ವ್ಯಾಪಕವಾಗಿ ಹಬ್ಬುತ್ತಿದೆ. ಈ ಮಧ್ಯೆ ಕೆಲವರು ಅನಗತ್ಯ ಓಡಾಟ ನಡೆಸುವ ಮೂಲಕ ಉಡಾಫೆ ಪ್ರದರ್ಶಿಸುತ್ತಿರುವುದು ಕಂಡು ಬರುತ್ತಿದೆ.

ತಾಲೂಕಿನಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ ಐನೂರರ ಗಡಿದಾಟಿದೆ. ತಾಲೂಕು ಆಡಳಿತ, ಆರೋಗ್ಯ ಇಲಾಖೆಯೂ ಈ ಹಿಂದಿಗಿಂತಲೂ ರೋಗ ನಿಯಂತ್ರಣಕ್ಕೆ ಹೆಚ್ಚಿನ ಕಾರ್ಯದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿವೆ. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದು ಅಧಿಕಾರಿ ವರ್ಗದ ದಿಗಿಲಿಗೆ ಕಾರಣವಾಗಿದೆ.

ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು: ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಳಗೊಂಡಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಲಾಕ್‌ಡೌನ್‌ನಿಂದ ಇಡೀ ನಗರ ಸ್ತಬ್ಧಗೊಂಡಿದ್ದರೂ ಆಸ್ಪತ್ರೆಗಳ ಮುಂದೆ ಜನಜಂಗುಳಿ ಹೆಚ್ಚಾಗಿ ಕಂಡುಬರುತ್ತಿದೆ. ಜ್ವರ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವವರು ಕೋವಿಡ್ ಟೆಸ್ಟ್ ಉಸಾಬರಿಯೇ ಬೇಡ ಎಂದು ಸಹಜವಾಗಿ ಆಸ್ಪತ್ರೆಗಳ ಕದ ತಟ್ಟುತ್ತಿದ್ದಾರೆ. ಆದರೆ, ವಿಪರ್ಯಾಸವೆಂದರೆ ಇಲ್ಲೂ ಕೂಡ ಯಾವುದೇ ಮುಂಜಾಗ್ರತೆಯಿಲ್ಲದೆ ನಿರ್ಲಕ್ಷ್ಯ ತೋರುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಹಲವು ಗ್ರಾಮಗಳಲ್ಲಿ ಸೋಂಕಿತರು: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಇವುಗಳಲ್ಲಿ ಹಲವರಿಗೆ ಹೊನ್ನಾನಾಯಕ್ಕನಹಳ್ಳಿ ಕ್ವಾರಂಟೈನ್ ಸೆಂಟರ್, ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಇನ್ನಿತರ ಕಡೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಸಾರ್ವಜನಿಕ ಆಸ್ಪತ್ರೆಯ ಎರಡು ಕೊಠಡಿಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಅದರಲ್ಲೂ ಕೆಲವರು ಸಂಪರ್ಕಕ್ಕೆ ಸಿಗದೆ, ನಿರ್ಲಕ್ಷ್ಯವಹಿಸುತ್ತಿರುವುದು ಕಂಡುಬರುತ್ತಿದೆ.

ಆಸ್ಪತ್ರೆಗೆ ಹೋಗುವ ನೆಪದಲ್ಲಿ ಓಡಾಟ : ತಾಲೂಕಿನಲ್ಲಿ ಲಾಕ್‌ಡೌನ್ ಯಶಸ್ವಿಗಾಗಿ ಪೊಲೀಸರು ಹಾಗೂ ಮೊಬೈಲ್ ಸ್ಕ್ವಾಡ್ ತಂಡ ನಿರಂತರವಾಗಿ ಶ್ರಮಿಸುತ್ತಿರುವುದು ಕಂಡು ಬರುತ್ತಿದೆ. ಮಧ್ಯಾಹ್ನ 12ರ ನಂತರ ಎಲ್ಲ ಅಂಗಡಿ ಬಾಗಿಲುಗಳನ್ನು ಕಡ್ಡಾಯವಾಗಿ ಮುಚ್ಚಿಸಲಾಗುತ್ತಿದೆ. ಅನಗತ್ಯವಾಗಿ ಓಡಾಟ ನಡೆಸುವವರನ್ನು ಪೊಲೀಸರು ಪರಿಶೀಲನೆ ನಡೆಸಿ, ದಂಡ ವಿಧಿಸುತ್ತಿದ್ದಾರೆ. ಆದರೆ, ಈ ತಂಡಗಳಿಗೆ ಸಿಕ್ಕಿಬೀಳುವ ಬಹುತೇಕರು ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‌ಗೆ ಹೋಗಬೇಕು ಎಂಬ ಕಾರಣಗಳನ್ನು ನೀಡಿ ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net