

ಭದ್ರಾವತಿ: ನಗರದ ಚನ್ನಗಿರಿ ರಸ್ತೆ (ಡಾ. ರಾಜ್‌ಕುಮಾರ್ ರಸ್ತೆ) ಅಗಲೀಕರಣ ಕಾರ್ಯ ಸೋಮವಾರದಿಂದ ಆರಂಭವಾಗಿದೆ. ಮೊದಲ ಹಂತದಲ್ಲಿ ಪಿಡಬ್ಲುೃಡಿಯಿಂದ ಮಾಧವಾಚಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗೆ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿದೆ.
ಕಾಮಗಾರಿ ಸಲುವಾಗಿ ಪಾದಚಾರಿ ಮಾರ್ಗದಲ್ಲಿದ್ದ ಕಲ್ಲುಗಳನ್ನು ಕಿತ್ತು, ಐದಾರು ಅಡಿ ಆಳದ ಗುಂಡಿ ತೆಗೆಯಲಾಗಿದೆ. ಸೋಮವಾರ ಸುರಿದ ಮಳೆಯಿಂದ ಗುಂಡಿಯೊಳಗೆ ನೀರು ತುಂಬಿದೆ. ಇದರಿಂದ ಗ್ರಾಹಕರು ರಸ್ತೆಯಿಂದ ಅಂಗಡಿ ಬಾಗಿಲಿಗೆ ದಾಟಲು ಹರಸಾಹಸ ಮಾಡಬೇಕಿದೆ.
ಚರಂಡಿಯನ್ನು ದಾಟಲು ನಡುವೆ ಮರದ ದಿಮ್ಮಿ, ಹಲಗೆ ಇಡಲಾಗಿದೆ. ಆದರೆ ಸಾರ್ವಜನಿಕರು ಭಯದಲ್ಲೇ ದಾಟುವಂತಾಗಿದೆ. ಪಿತೃಪಕ್ಷ, ದಸರಾ ಹಾಗೂ ದೀಪಾವಳಿ ಹಬ್ಬಗಳು ಸಾಲಾಗಿ ಬರುತ್ತಿರುವ ಈ ಸಂದರ್ಭದಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವ ನಗರಸಭೆ, ಪಿಡಬ್ಲುೃಡಿ ಇಲಾಖೆ ಇಂಜಿನಿಯರ್‌ಗಳನ್ನು ಅಂಗಡಿ ಮಾಲೀಕರು ಶಪಿಸುತ್ತಿದ್ದಾರೆ.
50 ಅಡಿ ರಸ್ತೆ ಅಗಲೀಕರಣ ಅಂಗವಾಗಿ ಹೆಚ್ಚುವರಿ ಕಟ್ಟಡ ತೆರವು ವಿಚಾರಕ್ಕೆ ಸಂಬಂಧಿಸಿ ನಗರಸಭೆ ಹಾಗೂ ಪಿಡಬ್ಲುೃಡಿ ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಕಳೆದ ೆಬ್ರವರಿಯಿಂದಲೂ ಹಗ್ಗ ಜಗ್ಗಾಟ ನಡೆಯುತ್ತಲೇ ಇತ್ತು. ಶಾಸಕ ಸಂಗಮೇಶ್ವರ್ ಮಾತುಕತೆ ನಡೆಸಿದ್ದರಿಂದ ಅಂತಿಮವಾಗಿ 40 ಅಡಿ ರಸ್ತೆ ಅಗಲೀಕರಣಕ್ಕೆ ಕಟ್ಟಡ ಮಾಲೀಕರು ಒಪ್ಪಿಗೆ ಸೂಚಿಸಿದ್ದರು. ಗೋಡೆಗಳಿಗೆ ಗುರುತು ಸಹ ಮಾಡಲಾಗಿತ್ತು. ಆದರೆ ಕೆಲವರು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದರೆ, ಮತ್ತೆ ಕೆಲವರು ಹೆಚ್ಚುವರಿ ಕಟ್ಟಡವನ್ನು ಸ್ವತಃ ತೆರವುಗೊಳಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ನಡುವೆ ಕಾಮಗಾರಿಯೂ ನಡೆಯುತ್ತಿದೆ.