ಲೌಕಿಕಕ್ಕಿಂತ ಆಧ್ಯಾತ್ಮಿಕ ಜೀವನ ಆದ್ಯತೆ ಅವಶ್ಯ

channagiri
Published on

ಚನ್ನಗಿರಿ: ಲೌಕಿಕ ಜೀವನಕ್ಕೆ ಹೆಚ್ಚು ಒತ್ತು ಕೊಟ್ಟಿರುವ ಜನ, ಆಧ್ಯಾತ್ಮಿಕ ಜೀವನದತ್ತ ಗಮನ ನೀಡದಿರುವುದು ಇಂದಿನ ವಾಸ್ತವ ಸ್ಥಿತಿಯಾಗಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ.ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಶರಣ ಅಂಬಿಗರ ಚೌಡಯ್ಯ ಸ್ವರಣೋತ್ಸವ ಹಾಗೂ 860ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾತಿಗಳು ಬೇರೆ ಬೇರೆಯಾದರೂ ಮನುಷ್ಯ ಕುಲ ಒಂದೇ. ಆಚಾರ ವಿಚಾರಗಳು ಬೇರೆ ಬೇರೆಯಾದರೂ ಭೂಮಿ, ನೀರು, ಗಾಳಿ ಎಲ್ಲವೂ ಒಂದೇ ಆಗಿದೆ. ದೇವರು ಈ ಮೂರನ್ನು ನೀಡುವುದರಲ್ಲಿ ಭೇದ ಮಾಡಿಲ್ಲ. ನಾಲ್ಕು ದಿನ ಇದ್ದು ಹೋಗುವ ಮನುಷ್ಯ ಭೇದ ಮಾಡುವುದು ಸರಿಯಲ್ಲ. ನಮ್ಮ ಅನುಕೂಲಕ್ಕಾಗಿ ಜಾತಿ ಸೃಷ್ಟಿಸಿಕೊಂಡಿದ್ದೇವೆ. ಮನುಷ್ಯ ಕುಲ ಒಂದೇ ಎಂದು ಎಲ್ಲ ಶರಣರು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಮನುಷ್ಯನಿಗೆ ದುಡಿಮೆಯೇ ಮುಖ್ಯ ಎನ್ನುವುದಾದರೆ ಅದರ ಫಲ ದೊರೆಯಬೇಕು. ಅದರ ಜತೆ ಆಧ್ಯಾತ್ಮದ ಚಿಂತನೆ ಹಾಗೂ ಬಲ ಬೇಕು. ಭೂಮಿಯಲ್ಲಿ ಜನಿಸಿದ ಮೇಲೆ ಸಾಧನೆ, ಸೇವೆ, ಜೀವನದ ಮಹತ್ವ ಮತ್ತೊಬ್ಬರಿಗೆ ಮಾದರಿಯಾಗಿರಬೇಕು. ಅಂತಹ ವ್ಯವಸ್ಥೆಯಾಗಬೇಕು. ಆಗ ಮಾತ್ರ ಸಾರ್ಥಕವಾದ ಜೀವನವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಹೆಸರು ಮತ್ತು ಹಣಕ್ಕಾಗಿ ಸೇವೆ ಮಾಡಬಾರದು. ಸೇವೆಯಲ್ಲಿ ನಿಸ್ವಾರ್ಥವಿದ್ದಾಗ ಮಾತ್ರ ಸಾಧಕರಾಗಲು ಸಾಧ್ಯ. ಅದಕ್ಕಾಗಿ ಸದ್ದಿಲ್ಲದೇ ಸೇವೆ ಮಾಡಬೇಕು ಎನ್ನುವ ಶರಣರ ನುಡಿಯಂತೆ ನಾವು ನಡೆಯಬೇಕು. ಇದರಿಂದ ನಮಗೆ ತೃಪ್ತಿ ಮತ್ತು ನೆಮ್ಮದಿ ತರುತ್ತದೆ ಎಂದು ಹೇಳಿದರು.

ನಮ್ಮ ನಿಸ್ವಾರ್ಥ ಸೇವೆಗೆ ಫಲ ಹುಡುಕಿಕೊಂಡ ಗೌರವ ಬರುತ್ತದೆ. ನಾವಾಗಿಯೇ ಅದರ ಹಿಂದೆ ಹೋದಾಗ ನಮಗೆ ದಕ್ಕುವುದು ಮಾತ್ರ ಶೂನ್ಯ. ಭ್ರಮೆ ಎನ್ನುವುದು ಮನುಷ್ಯನ ದುರಂತದ ಪರಮಾವಧಿಯಾಗಿದೆ. ಅದಕ್ಕೆ ಅಧಿಕಾರದ, ಅಂತಸ್ತು, ಅತಿಯಾದ ಆತ್ಮವಿಶ್ವಾಸ, ಅಹಾಂಕಾರದ ಭ್ರಮೆಯಿಂದ ಹೊರಬರಲು ಒಬ್ಬ ಗುರು ಬೇಕು ಎಂದರು.

ಶ್ರವಣಬೆಳಗೂಳ ಅಧ್ಯಾಪಕ ಟಿ.ಎಚ್. ಶಿವರಾಜ್, ಡಾ.ಇಂಚರ, ಸಿದ್ದನಮಠ ಯುಗಧರ್ಮ ರಾಮಣ್ಣ, ಎಸ್.ಆರ್. ಕುಮಾರ್, ತಾವರೆಕೆರೆ ಟಿ.ಎಸ್. ಪ್ರಶಾಂತ್, ಜಂತುಕೊಳಲು ಲಲಿತಮ್ಮ, ಬೆಂಕಿಕೆರೆ ಎಸ್.ಚಂದ್ರಶೇಖರ್, ಧನಂಜಯ್, ಎಂ.ಬಿ. ನಾಗರಾಜ್, ಟಿ.ವಿ.ಚಂದ್ರಪ್ಪ, ಎಂ.ಯು. ಚನ್ನಬಸಪ್ಪ, ಲಿಂಗರಾಜ್, ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net