ಅನ್ನಸಂತರ್ಪಣೆ ಸೇವೆ ಬದಲಾವಣೆ ಸರಿಯಲ್ಲ

skp (7)
ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವದಲ್ಲಿ ಮಠದಿಂದ ಮಾಡುತ್ತಿದ್ದ ದಾಸೋಹ ಸೇವೆಯನ್ನು ರದ್ದುಪಡಿಸಿದ್ದನ್ನು ವಿರೋಧಿಸಿ ಭಕ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕುಮಾರಸ್ವಾಮಿ ಹಿರೇಮಠ್, ದೇವರಾಜ್, ವೀರೇಶ್ ಗೌಡ, ಶಿವಯ್ಯ ಎಸ್. ಶಾಸ್ತ್ರಿ, ಪಂಚಾಕ್ಷರಿ ಇತರರಿದ್ದರು.
Published on

ಶಿಕಾರಿಪುರ: ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯಲ್ಲಿ ಮಳೆಹಿರೇಮಠದಿಂದ ನಡೆಸಲಾಗುತ್ತಿದ್ದ ದಾಸೋಹ ಕಾರ್ಯಕ್ರಮವನ್ನು ಧಿಡೀರ್ ಬದಲಾಯಿಸಿ ಮುಜರಾಯಿ ಇಲಾಖೆಯಿಂದ ನಡೆಸಿದ್ದು ಸರಿಯಲ್ಲ ಎಂದು ಆರೋಪಿಸಿ ಭಕ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸರ್ಕಾರ ಹಿಂದು ದೇವಾಲಯಗಳ ನಿರ್ವಹಣೆಯಲ್ಲಿ ಸೋತಿದೆ. ದೇವಾಲಯಗಳಿಂದ ಬರುವಂತಹ ಆದಾಯವನ್ನು ಅನ್ಯ ಕೋಮುಗಳ ಉದ್ಧಾರಕ್ಕೆ ಬಳಸಲಾಗುತ್ತಿದೆ. ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ, ದೇಗುಲಗಳ ಆಚಾರ- ವಿಚಾರಗಳನ್ನು ಸರಿಯಾಗಿ ನಡೆಸುತ್ತಿಲ್ಲ. ಕೂಡಲೇ ಸರ್ಕಾರ ಹಿಂದು ದೇವಾಲಯಗಳನ್ನು ಭಕ್ತರ ಸುಪರ್ದಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಯಾವ ಕಾರಣಕ್ಕೂ ಮಠಗಳ ಮೇಲೆ ಪ್ರಭುತ್ವದ ದಾಳಿಯನ್ನು ಸಹಿಸುವದಿಲ್ಲ. ಪೂಜೆ, ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಹಾಗೆಯೇ ಜಾತ್ರೆಗೆ ಬರುವ ಭಕ್ತರಿಗೆ ಅನ್ನದಾಸೋಹ ಮಾಡಲಾಗುತ್ತದೆ. ಆದರೆ ಈ ಬಾರಿ ಪೂರ್ವಭಾವಿ ಸಭೆಯಲ್ಲಿ ನುಡಿದಂತೆ ನಡೆಯದೆ ಮಠದಿಂದ ಅನ್ನದಾಸೋಹ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇಂತಹ ಕಹಿ ಘಟನೆಗಳು ನಡೆಯದಂತೆ ಸಂಬಂಧಿಸಿದವರು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಅತ್ಯಂತ ಕಷ್ಟದ ಕಾಲದಲ್ಲಿಯೂ ಮಳೆಹಿರೇಮಠದ ಶ್ರೀಗಳು ದಾಸೋಹ ಸೇವೆ ನಡೆಸುತ್ತಿದ್ದಾರೆ. ಈಗ ಈ ರೀತಿ ಆಗಿರುವುದು ನೋವಾಗಿದೆ. ಸರ್ಕಾರ ಅವುಗಳ ಮೇಲೆ ಪ್ರಹಾರ ಮಾಡಿದರೆ ಹಿಂದು ಸಮಾಜ ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಪ್ರಮುಖರಾದ ಕುಮಾರಸ್ವಾಮಿ ಹಿರೇಮಠ್, ದೇವರಾಜ್, ವೀರೇಶ್ ಗೌಡ, ಶಿವಯ್ಯ ಎಸ್. ಶಾಸ್ತ್ರಿ, ಪಂಚಾಕ್ಷರಿ, ಬಿಳವಾಣಿ ಬಸವರಾಜ್, ನಂದೀಶ್, ರವಿ ಗೌಡ, ದೇಸಾಯಿ ಗೌಡ, ಚಂದ್ರಶೇಖರ್, ಶಿವಕುಮಾರ್, ಸಂದೀಪ್, ಬಿ.ಎಂ.ಚನ್ನವೀರಯ್ಯ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net