

ಶಿವಮೊಗ್ಗ: ವಕ್ಫ್ ಎನ್ನುವುದು ದಾನದ ಮೂಲಕ ಬಂದ ಆಸ್ತಿ ರಕ್ಷಣೆಗಾಗಿ ಇರುವ ಮಂಡಳಿ. ವಕ್ಫ್ ಆಸ್ತಿಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೂ ಪ್ರಸ್ತುತ ಚರ್ಚೆಗೆ ಗ್ರಾಸವಾಗಿರುವ ವಕ್ಫ್ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಧೀಕರಣದ ತೀರ್ಪು ಅಂತಿಮ ಎಂದು ಹಿರಿಯ ವಕೀಲ ಸುಹೇಲ್ ಅಹಮ್ಮದ್ ಹೇಳಿದರು.
ನಗರದ ಜಿಲ್ಲಾ ವಕೀಲರ ಭವನದಲ್ಲಿ ಸೋಮವಾರ ವಕೀಲರ ಸಂಘ ಹಾಗೂ ಅಧಿವಕ್ತ ಪರಿಷತ್‌ನಿಂದ ವಕ್ಫ್ ಕಾಯ್ದೆ ತಿದ್ದುಪಡಿ ದೇಶಕ್ಕೆ ಪೂರಕವೇ, ಮಾರಕವೇ? ವಿಷಯ ಕುರಿತು ಆಯೋಜಿಸಿದ್ದ ಸಂವಾದ ಮತ್ತು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಯಾವ ಸ್ವರೂಪದಲ್ಲಿ ಇರುತ್ತದೆಯೋ ಅದೇ ಸ್ವರೂಪದಲ್ಲಿ ಮುಂದುವರಿಯಲಿದೆ ಎಂದರು.
ಕೆಲವೊಮ್ಮೆ ಸುಪ್ರೀಂ ಕೋರ್ಟ್ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಲಿದೆ. ಆದರೂ ಅಂತಿಮವಾಗಿ ನ್ಯಾಯಾಧೀಕರಣಕ್ಕೆ ವರ್ಗಾವಣೆ ಆಗಲಿದೆ. ಆಸ್ತಿ ರಕ್ಷಣೆಗಾಗಿಯೇ ವಕ್ಫ್‌ಗೆ ತಿದ್ದುಪಡಿ ಮಾಡಲಾಗಿದ್ದು ಒಮ್ಮೆ ವಕ್ಫ್ ಎಂದಾದರೆ ತಿದ್ದುಪಡಿ ಅಸಾಧ್ಯ ಎಂದು ಹೇಳಿದರು.
ಇಸ್ಲಾಂನಲ್ಲಿ ದಿನಕ್ಕೆ ಐದು ಬಾರಿ ನಮಾಜ್, ರಂಜಾನ್‌ನಲ್ಲಿ 30 ದಿನ ಉಪವಾಸ, ಚಾರಿಟಿಗಳು ಅತಿ ಮುಖ್ಯವಾಗಿದ್ದು ಅವುಗಳನ್ನು ಪಾಲನೆ ಮಾಡಬೇಕು. ಷರಿಯತ್ ಕಾನೂನು ವೈಯಕ್ತಿಕವಾಗಿದೆ. ಆದರೆ ಸಾಂವಿಧಾನಿಕ ಕಾನೂನು ಪಾಲನೆ ಮಾಡಬೇಕು. ಅವುಗಳಿಗಿಂತ ವಕ್ಫ್ ಕಾನೂನು ಭಿನ್ನ ಎಂದರು.
ಹಿರಿಯ ವಕೀಲ ಅಶೋಕ್ ಜಿ. ಭಟ್ ಮಾತನಾಡಿ, ಕೆಲ ಆಸ್ತಿಗಳನ್ನು ವಕ್ಫ್‌ಗೆ ನೀಡಲಾಗಿದೆ. ವಕ್ಫ್ ಭೂಮಿ ಎಂದು ತಿಳಿಯದೆ ಕೆಲವರು ಅನುಭೋಗದಲ್ಲಿದ್ದಾರೆ. ಇನ್ನೂ ಕೆಲವರು ತಿಳಿಯದೆ ಅದನ್ನು ಖರೀದಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲಕುವಂತಾಗುತ್ತದೆ. ಇಂತಹ ಖರೀದಿಸಿದವ ಅನುಭೋಗದಾರ ಎಂದು ಮಾತ್ರ ಕರೆಯಲಾಗುತ್ತದೆ. ವಕ್ಫ್ ಆಸ್ತಿ ತನಗೆ ಸೇರಿದ್ದೆಂದು ಕ್ಲೇಮ್ ಮಾಡುವವರು ಅದಕ್ಕೆ ಸೂಕ್ತ ದಾಖಲೆ ನೀಡಬೇಕು ಎಂದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದರಾಧ್ಯ, ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ, ಹಿರಿಯ ವಕೀಲರಾದ ಕೆ.ಬಸಪ್ಪ ಗೌಡ, ಹಿರಿಯ ವಕೀಲ ಅಶೋಕ್ ಜಿ. ಭಟ್, ರಾಜೇಶ್ ಶಾಸಿ, ಅಧಿವಕ್ತ ಪರಿಷತ್ ಉಪಾಧ್ಯಕ್ಷ ಹಾಲಪ್ಪ ಗೌಡ ಉಪಸ್ಥಿತರಿದ್ದರು.