

ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರಿಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಗೆ (ನೀಟ್) ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ, ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಬೇರೆ ಊರು ಅಥವಾ ರಾಜ್ಯಗಳಿಗೆ ತೆರಳಲು ಅನನುಕೂಲವಾಗುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಈ ನಿರ್ಧಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಇಚ್ಛಿಸಿದಲ್ಲಿ ತಿದ್ದುಪಡಿ ಮಾಡಲು ಏಪ್ರಿಲ್ 14ರವರೆಗೆ ಅವಕಾಶವಿದೆ. ಅಧಿಕೃತ ವೆಬ್ಸೈಟ್ ntaneet.nic.in ಗೆ ಲಾಗಿನ್ ಆಗುವ ಮೂಲಕ ಬದಲಾವಣೆ ಮಾಡಬಹುದು ಎಂದು ಎನ್ಟಿಎ ತಿಳಿಸಿದೆ.
ಇದಷ್ಟೇ ಅಲ್ಲದೆ, ಅರ್ಜಿಯಲ್ಲಿ ಬೇರೆ ಯಾವುದೇ ತಿದ್ದುಪಡಿಗಳನ್ನು ಮಾಡಲು ಅಭ್ಯರ್ಥಿಗಳು ಸ್ವತಂತ್ರರಾಗಿದ್ದಾರೆ.
ಒಂದು ವೇಳೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅಭ್ಯರ್ಥಿಗಳು ಅಪೇಕ್ಷಿಸಿದ್ದರೂ, ಅಂತಹ ಬದಲಾವಣೆಗಳು ಅಂತಿಮವಾಗಿ ಎನ್ಟಿಎ ವಿವೇಚನೆಗೆ ಒಳಪಟ್ಟಿರುತ್ತವೆ. ಒಂದೊಮ್ಮೆ ಆಡಳಿತಾತ್ಮಕ ಕಾರಣಕ್ಕಾಗಿ ಬೇರೆ ಕೇಂದ್ರಕ್ಕೆ ನಿಯೋಜಿಸಲ್ಪಟ್ಟಿದ್ದರೂ, ಈ ವಿಚಾರದಲ್ಲಿ ಎನ್ಟಿಎ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಅರ್ಜಿಯಲ್ಲಿ ತಿದ್ದುಪಡಿ ಮಾಡಿ ಸಬ್ಮಿಟ್ ಮಾಡಲು ಏಪ್ರಿಲ್ 14ರ ಸಂಜೆ ಐದು ಗಂಟೆವರೆಗಷ್ಟೇ ಅವಕಾಶವಿದೆ. ಇನ್ನು ಶುಲ್ಕ ಪಾವತಿಗೆ ಅದೇ ದಿನ ರಾತ್ರಿ 11.50ರವರೆಗೆ ಕಾಲಾವಕಾಶ ನೀಡಲಾಗಿದೆ. (ಏಜೆನ್ಸೀಸ್)