

ನವದೆಹಲಿ: ‘ಚಂದ್ರಯಾನ-3’ರ ಯಶಸ್ಸಿನ ಬಳಿಕ ಭಾರತ ಇನ್ನೊಮ್ಮೆ ಚಂದ್ರಯಾನಕ್ಕೆ ಸಜ್ಜಾಗಿದ್ದು, ಈ ಸಲ ಚಂದ್ರನ ಮೇಲೆ ಇಳಿದು ವಾಪಸ್ ಬರಲು ನಿರ್ಧರಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಚಂದ್ರನಲ್ಲಿ ಇಳಿದು ಮತ್ತೆ ಭೂಮಿಗೆ ಮರಳುವ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಪ್ರಾತ್ಯಕ್ಷಿಕೆಯ ಈ ಯಾನಕ್ಕೆ ‘ಚಂದ್ರಯಾನ-4’ ಎಂದು ಹೆಸರಿಡಲಾಗಿದ್ದು, ಭೂಮಿಗೆ ಮರಳಿದ ಬಳಿಕ ಚಂದ್ರನಿಂದ ಸಂಗ್ರಹಿಸಿ ತಂದಿರುವ ಮಾದರಿಗಳ ವಿಶ್ಲೇಷಣೆ ಕೂಡ ನಡೆಯಲಿದೆ. 2040ರಲ್ಲಿ ನಡೆಸಲು ಉದ್ದೇಶಿಸಿರುವ ಮಾನವಸಹಿತ ಚಂದ್ರಯಾನಕ್ಕೆ ಬುನಾದಿ ಆಗುವಂಥ ತಂತ್ರಜ್ಞಾನ ಸಾಮರ್ಥ್ಯ ಸಾಧಿಸುವ ನಿಟ್ಟಿನಲ್ಲಿ ಈ ‘ಚಂದ್ರಯಾನ-4’ ನಡೆಯಲಿದೆ. ಡಾಕಿಂಗ್/ಅನ್ಡಾಕಿಂಗ್, ಲ್ಯಾಂಡಿಂಗ್, ಚಂದ್ರನಲ್ಲಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಭೂಮಿಗೆ ಸುರಕ್ಷಿತ ಹಿಂದಿ ರುಗುವಿಕೆಗೆ ಪೂರಕ ಪ್ರಮುಖ ತಂತ್ರಜ್ಞಾನಗಳನ್ನು ಈ ಚಂದ್ರಯಾನ ಒಳಗೊಂಡಿದೆ. 2035ರಲ್ಲಿ ಭಾರತೀಯ ಅಂತರಿಕ್ಷ ನಿಲ್ದಾಣ, 2040ರಲ್ಲಿ ಮಾನವಸಹಿತ ಚಂದ್ರಯಾನ ನಡೆಯುವ ಅಮೃತಕಾಲದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಭಾರತ ಸರ್ಕಾರ ವಿಸõತ ದೃಷ್ಟಿ ಹರಿಸಿದೆ. ಚಂದ್ರಯಾನ-4 ಕುರಿತ ಬಾಹ್ಯಾಕಾಶ ನೌಕೆ ಅಭಿವೃದ್ಧಿ ಮತ್ತು ಉಡಾವಣೆ ಜವಾಬ್ದಾರಿ ಇಸ್ರೋ ವಹಿಸಿಕೊಳ್ಳಲಿದೆ. ಈ ಯೋಜನೆಗೆ ಒಟ್ಟು 2104.06 ಕೋಟಿ ರೂ. ಅಂದಾಜಿಸಲಾಗಿದೆ.
ಪ್ರಧಾನಮಂತ್ರಿ - ಜನಜಾತಿ ಉನ್ನತ್ ಗ್ರಾಮ್ ಅಭಿಯಾನ : ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 63 ಸಾವಿರಕ್ಕೂ ಅಧಿಕ ಬುಡಕಟ್ಟು ಬಹುಸಂಖ್ಯಾತ ಮತ್ತು ಬುಡಕಟ್ಟು ಗ್ರಾಮಗಳ ಉನ್ನತಿಯ ಗುರಿ ಹೊಂದಿರುವ ಪ್ರಧಾನಮಂತ್ರಿ ಜನಜಾತಿ ಉನ್ನತ ಗ್ರಾಮ ಅಭಿಯಾನಕ್ಕೂ ಸಂಪುಟ ಅನುಮೋದನೆ ನೀಡಿದೆ. ಒಟ್ಟು 79,156 ಕೋಟಿ ರೂ. ಮೌಲ್ಯದ ಈ ಯೋಜನೆಯಲ್ಲಿ ಕೇಂದ್ರದ ಪಾಲು 56,333 ಕೋಟಿ ರೂ. ಹಾಗೂ ರಾಜ್ಯದ ಪಾಲು 22,823 ಕೋಟಿ ರೂ. ಆಗಿದೆ. ಈ ಯೋಜನೆ ಮೂಲಕ ಬುಡಕಟ್ಟು ಸಮುದಾಯದ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಗುರಿ ಹೊಂದಲಾಗಿದೆ. 30 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 549 ಜಿಲ್ಲೆಗಳ ಸುಮಾರು 63 ಸಾವಿರ ಗ್ರಾಮಗಳ 5 ಕೋಟಿಗೂ ಅಧಿಕ ಬುಡಕಟ್ಟು ಜನರನ್ನು ಇದು ಒಳಗೊಳ್ಳಲಿದೆ.
ಬಯೋರೈಡ್ ಮುಂದುವರಿಕೆ : ಜೈವಿಕ ತಂತ್ರಜ್ಞಾನ ಇಲಾಖೆಯ 2 ಯೋಜನೆ ಗಳನ್ನು ವಿಲೀನಗೊಳಿಸಿ ಮುಂದುವರಿಸಲಿಕ್ಕೂ ಸಂಪುಟ ಅನುಮೋದನೆ ನೀಡಿದೆ. ಬಯೋಟೆಕ್ನಾಲಜಿ ರಿಸರ್ಚ್ ಇನ್ನೋವೇಷನ್ ಆಂಡ್ ಎಂಟರ್ಪ್ರಿನ್ಯೂರ್ಷಿಪ್ ಡೆವಲಪ್ವೆುಂಟ್ (ಬಯೋ-ರೈಡ್) ಎಂಬ ಹೊಸ ಹೆಸರಿನಲ್ಲಿ ಮುಂದುವರಿಯವ ಈ ಯೋಜನೆ ಬಯೋಮ್ಯಾನುಫ್ಯಾಕ್ಚರಿಂಗ್ ಮತ್ತು ಬಯೋ ಫೌಂಡ್ರಿ ಎಂಬ 2 ಘಟಕಗಳನ್ನು ಹೊಂದಿರಲಿದೆ.
ಮಾಧ್ಯಮ-ಮನರಂಜನಾ ವಲಯಕ್ಕೂ ಉತ್ತೇಜನ : ಆನಿಮೇಷನ್, ವಿಷುವಲ್ ಇಫೆಕ್ಟ್ ್ಸ ಗೇಮಿಂಗ್, ಕಾಮಿಕ್ಸ್ ಆಂಡ್ ಎಕ್ಸ್ಟೆಂಡೆಡ್ ರಿಯಾಲಿಟಿ (ಎವಿಸಿಜಿ-ಎಕ್ಸ್ಆರ್)ಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ (ಎನ್ಸಿಒಇ) ಸ್ಥಾಪನೆಗೂ ಅನುಮೋದನೆ ನೀಡುವ ಮೂಲಕ ಸರ್ಕಾರ ಮಾಧ್ಯಮ ಮತ್ತು ಮನೋರಂಜನಾ ವಲಯಕ್ಕೆ ಉತ್ತೇಜನ ನೀಡಲು ಮುಂದಾಗಿದೆ. ಭಾರತದಲ್ಲಿನ 2013ರ ಕಂಪನೀಸ್ ಆಕ್ಟ್ನ ಸೆಕ್ಷನ್ 8 ಕಂಪನಿ ಆಗಿ ತೆರೆಯಲು ಈ ಮೂಲಕ ಅನುವು ಮಾಡಿಕೊಡಲಾಗುತ್ತಿದೆ. ಮುಂಬೈನಲ್ಲಿ ಈ ಎನ್ಸಿಒಇ ಸ್ಥಾಪನೆ ಆಗಲಿದೆ.
ಶುಕ್ರಯಾನಕ್ಕೂ ಸಜ್ಜು: ಮಂಗಳ, ಚಂದ್ರಯಾನದ ಬಳಿ ಶುಕ್ರಯಾನಕ್ಕೂ ಭಾರತ ಸಜ್ಜಾಗಿದ್ದು, ಅದಕ್ಕೂ ಬುಧವಾರ ಸಂಪುಟದ ಅನುಮೋದನೆ ಸಿಕ್ಕಿದೆ. ವೀನಸ್ ಆರ್ಬಿಟರ್ ಮಿಷನ್ (ವಿಒಎಂ) ಅಭಿವೃದ್ಧಿಗೂ ಪ್ರಧಾನಿ ನೇತೃತ್ವದ ಸಂಪುಟ ಅನುಮೋದನೆ ನೀಡಿದೆ. ಇದು ಶುಕ್ರ ಗ್ರಹವನ್ನು ಅನ್ವೇಷಿಸುವ ಮತ್ತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆ ಆಗಿದೆ. ಶುಕ್ರ ಭೂಮಿಗೆ ಅತಿ ಸಮೀಪದ ಗ್ರಹವಾಗಿದ್ದು ಹಾಗೂ ಭೂಮಿಯಂಥದ್ದೇ ಪರಿಸ್ಥಿತಿಗಳಿಂದ ರೂಪುಗೊಂಡಿದೆ ಎನ್ನಲಾಗಿದೆ. ಗ್ರಹಗಳ ಪರಿಸರಗಳು ಹೇಗೆ ವಿಭಿನ್ನವಾಗಿ ವಿಕಸನಗೊಳ್ಳಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಶುಕ್ರಯಾನ ಅನನ್ಯ ಅವಕಾಶ ಆಗಲಿದೆ ಎನ್ನಲಾಗುತ್ತಿದೆ. ಈ ಯಾನದ ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಹಾಗೂ ಉಡಾವಣೆಯ ಜವಾಬ್ದಾರಿಯನ್ನೂ ಇಸ್ರೋ ವಹಿಸಿಕೊಳ್ಳಲಿದೆ. 2028ರ ಮಾರ್ಚ್ನಲ್ಲಿ ಈ ಯಾನ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಶುಕ್ರಯಾನಕ್ಕಾಗಿ ಒಟ್ಟು 1236 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದ್ದು, ಆ ಪೈಕಿ 824 ಕೋಟಿ ರೂ. ಬಾಹ್ಯಾಕಾಶ ನೌಕೆಗೇ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇಸ್ರೋದಿಂದ ಮುಂದಿನ ಪೀಳಿಗೆಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೂ ಸಂಪುಟ ಅನುಮೋದನೆ ನೀಡಿದ್ದು, ಈ ಮೂಲಕ ಮರುಬಳಕೆಯ ಹಾಗೂ ಕಡಿಮೆ ವೆಚ್ಚದ ಉಡಾವಣಾ ವಾಹನಗಳು ದೇಶದಲ್ಲಿ ತಯಾರಾಗಲಿವೆ. ವೈಜ್ಞಾನಿಕ ಸಂಶೋಧನೆಗಾಗಿ ದೇಶದ್ದೇ ಆದ ‘ಭಾರತೀಯ ಅಂತರಿಕ್ಷ ನಿಲ್ದಾಣ’ (ಬಿಎಎಸ್) ಸ್ಥಾಪಿಸಲಿಕ್ಕೂ ಸಂಪುಟದ ಅನುಮೋದನೆ ಲಭಿಸಿದೆ. 2028ರಲ್ಲಿ ಇದರ ಮೊದಲ ಮಾಡ್ಯೂಲ್ ಉಡಾವಣೆ ಆಗಲಿದ್ದು, 2035ರಲ್ಲಿ ಬಿಎಎಸ್ ಕಾರ್ಯಾರಂಭಿಸಲಿದೆ.
ಪಿಎಂ-ಆಶಾ ಮುಂದುವರಿಕೆ: ಪ್ರಧಾನಮಂತ್ರಿ ಅನ್ನದಾತ ಆದಾಯ ಸಂರಕ್ಷಣಾ ಅಭಿಯಾನ (ಪಿಎಂ-ಆಶಾ) ಯೋಜನೆ ಮುಂದುವರಿಸಲಿಕ್ಕೂ ಅನುಮೋದನೆ ನೀಡಲಾಗಿದೆ. ರೈತರಿಗೆ ಲಾಭದಾಯಕ ಬೆಲೆ ಹಾಗೂ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ದಿನನಿತ್ಯದ ಬಳಕೆಯ ವಸ್ತುಗಳನ್ನು ಒದಗಿಸಲು ಈ ಯೋಜನೆ ಮುಂದುವರಿಸಲಾಗಿದೆ. ಇದಕ್ಕಾಗಿ 2025-26ರವರೆಗಿನ 15ನೇ ಹಣಕಾಸು ಆಯೋಗದ ವರ್ತಲದಲ್ಲಿ ಒಟ್ಟು ಹಣಕಾಸು ಹೊರಹೋಗುವಿಕೆ 35 ಸಾವಿರ ಕೋಟಿ ರೂ. ಆಗಿರಲಿದೆ.
ಪೋಷಕಾಂಶ ಆಧರಿತ ಸಹಾಯಧನ: ಹಿಂಗಾರು ಅವಧಿಯ (2024ರ ಅ.10ರಿಂದ 2025ರ ಮಾ. 31) ಫಾಸ್ಫ್ಯಾಟಿಕ್ ಮತ್ತು ಪೊಟ್ಯಾಷಿಕ್ (ಪಿ ಆಂಡ್ ಕೆ) ಗೊಬ್ಬರಗಳ ಮೇಲೆ ಪೋಷಕಾಂಶ ಆಧರಿತ ಸಹಾಯಧನ (ಎನ್ಬಿಎಸ್) ದರಕ್ಕೂ ಸಂಪುಟ ಅನುಮೋದನೆ ನೀಡಿದೆ. ಇದರಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಕೈಗೆಟುಕುವ ಬೆಲೆಯಲ್ಲಿ ಗೊಬ್ಬರಗಳು ಸಿಗಲಿವೆ. ಹಿಂಗಾರು ಋತುವಿನ ತಾತ್ಕಾಲಿಕ ಬಜೆಟ್ ಅಗತ್ಯವು 24,475.53 ಕೋಟಿ ರೂ. ಆಗಿದೆ.