

ಶ್ರೀರಂಗಪಟ್ಟಣ: ನಾಡಿನ ಸರ್ವ ಧರ್ಮಗಳ ಜನರು ಸಮಾಜದಲ್ಲಿ ಸತ್ಕಾರ್ಯಗಳನ್ನು ನೆರವೇರಿಸುವಂತೆ ಅರಿವು ಮೂಡಿಸುವಲ್ಲಿ ಚಂದ್ರವನ ಆಶ್ರಮ ಮುಂದಿದೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಪಟ್ಟಣ ಹೊರವಲಯದ ಪೂರ್ವವಾಹಿನಿಯ ಕಾವೇರಿ ತೀರದ ಚಂದ್ರವನ ಆಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ ಹಾಗೂ ಮಡಿಲಕ್ಕಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಮಠದ ವಿಜಯದಶಮಿ ಆಚರಣೆ ಅತ್ಯಂತ ಮಹತ್ವಪೂರ್ಣ ಹಾಗೂ ಸಮಾಜದ ಸುಭಿಕ್ಷಕ್ಕೆ ಅವಶ್ಯ. ಇಲ್ಲಿ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಎಲ್ಲ ವರ್ಗದ ಜನರು ಮಕ್ಕಳಂತೆ ಗುರುಸೇವೆಗೆ ಒಂದಾಗಿರುವುದು ನಮ್ಮಲ್ಲಿನ ಏಕೆತೆಗೆ ಸಾಕ್ಷಿಯಾಗಿದೆ ಎಂದು ನುಡಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕ್ಷೇತ್ರದ ಕಾವೇರಿ ತೀರದಲ್ಲಿ ಚಂದ್ರವನ ಆಶ್ರಮ ನೆಲೆನಿಂತ ದಿನಗಳಿಂದಲೂ ಸಮಾಜದ ಏರಿಳಿತಗಳನ್ನು ಸುಧಾರಿಸುವ ಜತೆಗೆ ಜನರಿಗೆ ಮೊದಲು ಮಠದ ಅನ್ನ ಹಾಕಿ ಸುಜ್ಞಾನದ ತಿಳಿವಳಿಕೆಯನ್ನು ನೀಡುತ್ತಾ ಬಂದಿದೆ ಎಂದು ಪ್ರಶಂಸಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಯಾವುದೇ ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯಲು ಜ್ಞಾನ ಮತ್ತು ಭಕ್ತಿಯ ಅವಶ್ಯವಿದೆ. ಭಕ್ತಿ ನಮ್ಮೊಳಗೆ ಮುಗ್ಧತೆ, ಏಕಾಗ್ರತೆ ಹಾಗೂ ನಮ್ಮನ್ನು ನಿಯಂತ್ರಿಸುವ ಶಕ್ತಿ ನೀಡಿದರೆ, ಜ್ಞಾನ ತನ್ನನ್ನು ಅರ್ಥ ಮಾಡಿಕೊಳ್ಳುವ, ಎದುರಿರುವ ಜನರನ್ನು ಪ್ರೀತಿಸುವ ಹಾಗೂ ಈ ದೇಶವನ್ನು ಸದೃಢವಾಗಿ ಕಟ್ಟುವ ಮನಸ್ಥಿತಿಯನ್ನು ಬೆಳೆಸಲಿದೆ. ಹೀಗಾಗಿ ಗುರು ಮತ್ತು ಗುರುಪೀಠಗಳು ಸಾಕಷ್ಟು ಪ್ರಭಾವ ಬೀರುತ್ತವೆ ಎಂದರು.
ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ದೇಶದ ಒಳಿತಿಗಾಗಿ ನಿಂತ ಸೈನಿಕರು, ಅನ್ನದಾತ ರೈತರು ಹಾಗೂ ಶ್ರಮಿಕ ವರ್ಗದ ಏಳಿಗೆಗಾಗಿ ಶ್ರೀಮಠವಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ: ಶ್ರೀ ಮಠದ ವತಿಯಿಂದ ಕೊಡಮಾಡುವ ಕಾವೇರಿ ರಾಷ್ಟ್ರ ಪ್ರಶಸ್ತಿಯನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಕ್ಕಳ ತಜ್ಞೆ ಡಾ.ವಿಜಯಲಕ್ಷ್ಮೀ ಈಶ್ವರಪ್ಪ ಬಾಳೇಕುಂದ್ರಿ ಅವರಿಗೆ ಪ್ರದಾನ ಮಾಡಲಾಯಿತು. ಆಡಳಿತ ಕ್ಷೇತ್ರ ವಿಭಾಗದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಸಾಮಾಜಿಕ ಕ್ಷೇತ್ರದಲ್ಲಿ ಸುರೇಶ ಆರ್.ಸಜ್ಜನ್, ಸಾಹಿತ್ಯ ಕ್ಷೇತ್ರದಲ್ಲಿ ವಾಣಿ ಚಂದ್ರಯ್ಯ ನಾಯ್ಡು, ಉದ್ಯಮ ಕ್ಷೇತ್ರದಲ್ಲಿ ಎಂ.ಎಸ್.ರಮನಾಥ ಗುಪ್ತ, ಕೃಷಿ ಕ್ಷೇತ್ರದಲ್ಲಿ ಎಚ್.ಎಂ.ವಿಜಯೇಂದ್ರ ಅವರಿಗೆ ವಿವಿಧ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ಎಚ್.ಟಿ.ಮಂಜು, ಜೆಡಿಎಸ್ ಮುಖಂಡ ಮೊಹಮದ್ ಜಫ್ರುಲ್ಲಾ ಖಾನ್, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಉಪಸ್ಥಿತರಿದ್ದರು.