

Police | ಕೈಯಲ್ಲಿ ಮೊಬೈಲ್ ಒಂದಿದ್ದರೆ ಸಾಕು, ಜನರು ಎಲ್ಲಿ ಬೇಕಾದರೂ, ಯಾವ ಸಂದರ್ಭದಲ್ಲಾದರೂ ರೀಲ್ಸ್ ಮಾಡೋದನ್ನ ಮಾತ್ರ ನಿಲ್ಲಿಸಲ್ಲ. ಅಂದಹಾಗೆ ಇಲ್ಲೊಬ್ಬ ಪೊಲೀಸ್ ಅಧಿಕಾರಿಯ ಪತ್ನಿ ವಾಹನಗಳು ಓಡಾಡುವಂತಹ ರಸ್ತೆ ಮಧ್ಯೆ ನಿಂತು ಡ್ಯಾನ್ಸ್ ಮಾಡಿ, ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.
ಇನ್ನೂ ಈಕೆಯನ್ನ ಚಂಡೀಗಢ ಪೊಲೀಸ್ ಅಧಿಕಾರಿಯ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ಈಕೆ ಡ್ಯಾನ್ಸ್ ಮಾಡುತ್ತಿದ್ದ ದೃಶ್ಯವನ್ನು ಆಕೆಯ ಸಹೋದರಿ ಪೂಜಾ ಎಂಬುವವರು ಸೆರೆ ಹಿಡಿದಿದ್ದಾರೆ. ಇವರ ಈ ಹುಚ್ಚಾಟದಿಂದಾಗಿ ರಸ್ತೆ ಮಧ್ಯೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ. ಇನ್ನೂ ರಸ್ತೆಯ ಜೀಬ್ರಾ ಕ್ರಾಸಿಂಗ್ ಮುಂದೆ ಆಕೆ ಡ್ಯಾನ್ಸ್ ಮಾಡುತ್ತಿರೋದು ವೀಡಿಯೊದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ನಂತರ ಇವರಿಬ್ಬರ ನಡವಳಿಕೆಯಿಂದಾಗಿ ಬೇಸರಗೊಂಡ ಸಾರ್ವಜನಿಕರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಅವರು ನೀಡಿದ ದೂರಿನನ್ವಯ ಡ್ಯಾನ್ಸ್ ಮಾಡುತ್ತಿದ್ದ ಜ್ಯೋತಿ ಹಾಗೂ ವಿಡಿಯೋವನ್ನು ಸೆರೆಹಿಡಿದಿದ್ದ ಸಹೋದರಿ ಪೂಜಾರನ್ನು ಬಂಧಿಸಿದ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ಈ ದೃಶ್ಯವನ್ನು ಚಂಡೀಗಢ ಸೆಕ್ಟರ್-20 ರ ಗುರುದ್ವಾರ ಚೌಕ್‌ನಲ್ಲಿ ಸೆರೆ ಹಿಡಿಯಲಾಗಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿ ವಾಹನ ಸವಾರರು ಬೇಸರದಲ್ಲೆ ರಸ್ತೆ ಮಧ್ಯೆ ನಿಂತಿದ್ದಾರೆ. ಇನ್ನೂ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಇಬ್ಬರನ್ನೂ ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಕೊನೆಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಇಬ್ಬರೂ ಜಾಮೀನು ಪಡೆದು ವಾಪಸ್ ಆಗಿದ್ದಾರೆ.
ಈ ವಿಡಿಯೋವನ್ನು ಮಾರ್ಚ್ 20 ರಂದು ಸೆರೆಹಿಡಿದು ನಂತರ ರೀಲ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಬ್ಬರೂ ಮಹಿಳೆಯರನ್ನ ಪೊಲೀಸರು ವಿಚಾರಣೆ ನಡೆಸಿದಾಗ ಆ ದಿನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ವಾಪಸ್ ಬರುತ್ತಿದ್ದೆವು ಎಂದಿದ್ದಾರೆ.