

Wife Reels on The Road : ನಡುರಸ್ತೆಯಲ್ಲಿ ಪತ್ನಿ ರೀಲ್ಸ್ ಮಾಡಿದ್ದಕ್ಕೆ ಕಾನ್ಸ್ಟೆಬಲ್ ಪತಿಯೊಬ್ಬ ತನ್ನ ಕೆಲಸದಿಂದ ಅಮಾನತುಗೊಂಡಿರುವ ಘಟನೆ ಪಂಜಾಬ್, ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ನಡೆದಿದೆ.
ಆಕೆ ವಿವಾಹಿತ ಮಹಿಳೆ ಮತ್ತು ಹಿರಿಯ ಕಾನ್ಸ್ಟೆಬಲ್ ಅಜಯ್ ಕುಂಡು ಅವರ ಪತ್ನಿ. ಆಕೆಯ ಹೆಸರು ಜ್ಯೋತಿ. ಚಂಡೀಗಢ ಮೂಲದವರು. ಮಾರ್ಚ್ 20ರಂದು, ಜ್ಯೋತಿ ತನ್ನ ಪತಿಯೊಂದಿಗೆ ಪೂಜೆಗೆ ದೇವಸ್ಥಾನಕ್ಕೆಂದು ಹೋದರು. ಸಂಜೆ 4.30ಕ್ಕೆ ಪೂಜೆ ಮುಗಿಸಿ, ಹಿಂತಿರುಗುವಾಗ ಆಕೆಯ ಮನಸ್ಸಿಗೆ ಏನಾಯಿತು ಗೊತ್ತಿಲ್ಲ, ಇದ್ದಕ್ಕಿದ್ದಂತೆ ಸೆಕ್ಟರ್-20ರ ಗುರುದ್ವಾರ ಚೌಕ್ ಬಳಿಯ ಜೀಬ್ರಾ ಕ್ರಾಸಿಂಗ್‌ನಲ್ಲಿ ರೀಲ್ಸ್ ಮಾಡಲು ಪ್ರಾರಂಭಿಸಿದರು. ಸಿಗ್ನಲ್‌ನಲ್ಲಿ ಎರಡೂ ಬದಿಗಳಲ್ಲಿ ವಾಹನಗಳು ನಿಂತಿದ್ದರೂ ಜ್ಯೋತಿ ನೃತ್ಯ ಮಾಡುತ್ತಲೇ ಇದ್ದರು.
ಹಾಡು ಪ್ಲೇ ಆಗುತ್ತಿದ್ದಾಗ, ಅದನ್ನು ತನ್ನ ಪತಿಯ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದಳು. ಜೊತೆಗೆ ಬಂದಿದ್ದ ಆಕೆಯ ಅತ್ತಿಗೆ ರೀಲ್ಸ್ ಅನ್ನು ರೆಕಾರ್ಡ್ ಮಾಡಿದರು. ಅಷ್ಟೇ ಅಲ್ಲದೆ, ಮನೆಗೆ ಹೋಗಿ ಅಜಯ್ ಕುಂಡು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆ ವಿಡಿಯೋವನ್ನು ಅಪ್‌ಲೋಡ್ ಸಹ ಮಾಡಿದಳು. ತಕ್ಷಣ ಆ ವಿಡಿಯೋ ಎಲ್ಲೆಡೆ ವೈರಲ್ ಆಯಿತು. ಇದೇ ವಿಡಿಯೋ ಇದೀಗ ಗಂಡ ಕೆಲಸಕ್ಕೆ ಅಡ್ಡಿಯಾಗಿದೆ.
ಚಂಡೀಗಢದ ಸೆಕ್ಟರ್ 34 ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಜಸ್ಬೀರ್ ಅವರು ದೂರು ದಾಖಲಿಸಿದ್ದಾರೆ. ಇಬ್ಬರು ಮಹಿಳೆಯರಿಂದಾಗಿ ಸಂಚಾರಕ್ಕೆ ಅಡ್ಡಿಯಾಯಿತು ಎಂದು ದೂರಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಚಂಡೀಗಢ ಪೊಲೀಸರು ತನಿಖೆ ಆರಂಭಿಸಿದರು. ಎಎಸ್ಐ ಬಲ್ಜಿತ್ ಸಿಂಗ್ ನೇತೃತ್ವದ ತಂಡವು ಸೆಕ್ಟರ್ 20ರ ಗುರುದ್ವಾರ ಚೌಕ್ ಮತ್ತು ಸೆಕ್ಟರ್ 17ರ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು.
ರೀಲ್ಸ್ನಿಂದಾಗಿ ತೀವ್ರ ಸಂಚಾರ ಅಡಚಣೆ ಉಂಟಾಗಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ, ಇಬ್ಬರು ಮಹಿಳೆಯರ ವಿರುದ್ಧ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಐಪಿಸಿಯ ಸೆಕ್ಷನ್ 125, 292 ಮತ್ತು 3(5) ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಲ್ಲದೆ, ಕಾನ್ಸ್ಟೆಬಲ್ ಅಜಯ್ ಕುಂದು ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಜ್ಯೋತಿ ಮತ್ತು ಪೂಜಾ ಅವರಿಗೆ ತಕ್ಷಣವೇ ಜಾಮೀನು ಸಹ ನೀಡಲಾಗಿದೆ.
ಅಜಯ್ ಕುಂಡು ಅವರ ಅಮಾನತು ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಮಹಿಳೆಯ ತಪ್ಪಿಗೆ ಗಂಡನನ್ನು ಬಲಿಪಶುವನ್ನಾಗಿ ಮಾಡುವುದರಲ್ಲಿ ಅರ್ಥವೇನು? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅನೇಕ ಜನರು ಈ ನಿರ್ಧಾರವನ್ನು ಟೀಕಿಸಿದ್ದಾರೆ. ಸಾರ್ವಜನಿಕರು ನಿತ್ಯವೂ ಸಂಚರಿಸುವ ಬೀದಿಯಲ್ಲಿ ಇಂತಹ ದುರ್ವತನೆ ಸರಿಯಲ್ಲ ಎಂದು ಕೆಲವರು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಅನ್ನೋದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)