

ಬೆಂಗಳೂರು:
ಸಿಎಂ ಆಗುವ ಕನಸಿನಿಂದ ಏನೇನೋ ಹೇಳಿಕೆ ನೀಡಬೇಡಿ. ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂದಿರುವುದು ಖಂಡನೀಯ. ಕೂಡಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದು, ಆ ಕನಸು ನನಸಾಗಲಿ ಎಂಬ ದೃಷ್ಟಿಯಿಂದ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಯಾರನ್ನೋ ಸಂತಸ ಪಡಿಸಲು ಹಾಗೂ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ರೀತಿ ಹಿಂದೂಗಳಿಗೆ ಅಪಮಾನ ಮಾಡಿರುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ದಸರಾ ಉತ್ಸವ, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮೀಯರೂ ಭೇಟಿ ಕೊಡುತ್ತಾರೆಂಬುದು ನಮಗೂ ಗೊತ್ತಿದೆ. ಆದರೆ, ಇದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆ ಹಿಂದೂಗಳಿಗೆ ಮಾಡಿದ ಅಪಮಾನವಷ್ಟೆ ಅಲ್ಲ, ಇದು ಅಕ್ಷಮ್ಯ ಅಪರಾಧ ಎಂದರು.
ಸದನದಲ್ಲಿ ನಮಸ್ತೇ ಸದಾ ವತ್ಸಲೇ ಗೀತೆ ಹೇಳಿದ ಮೇಲೆ ಹೈಕಮಾಂಡಿನ ಒತ್ತಡ ಕಾರಣಕ್ಕಾಗಿ ಕ್ಷಮೆ ಕೇಳಿದ್ದರು. ಹೈಕಮಾಂಡ್‌ದು ಸದಾ ಒಡೆದಾಳುವ ನೀತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪದೇ ಪದೇ ಹಿಂದೂಗಳ ಅವಮಾನವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದ ವಿಷಯದಲ್ಲಿ ಅಷ್ಟೆಲ್ಲ ಅಪಪ್ರಚಾರ ನಡೆಯುತ್ತಿದ್ದರೂ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ ಎಂದರು.
ಗಾಂಧಿ ಕುಟುಂಬವನ್ನು ಖುಷಿಪಡಿಸಲು ರಾಮನಗರದಲ್ಲಿ ಏಸುಕ್ರಿಸ್ತನ 115 ಅಡಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದನ್ನು ಜನರು ಮರೆತಿಲ್ಲ ಎಂದರು.
ಶ್ರೀರಾಮ ರಾಮನಗರಕ್ಕೆ ಬಂದಿದ್ದ್ದ ಎಂಬ ಬಲವಾದ ನಂಬಿಕೆ ಹಿಂದೂಗಳಲ್ಲಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಹೇಳುತ್ತೇವೆ. ಏನು ಬೇಕಾದರೂ ಮಾತನಾಡುತ್ತೇವೆ ಎಂಬ ಧೋರಣೆ ಸರಿಯಲ್ಲ ಎಂದರು.
ಡಿಕೆಶಿ ಸೇರಿ ಕಾಂಗ್ರೆಸ್ ಪಕ್ಷದ ನಾಯಕರ ನಡವಳಿಕೆಗಳು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು, ಹಿಂದೂ ಧರ್ಮದ ಕುರಿತ ಅವರ ಹೇಳಿಕೆಗಳನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದರು.
ಬಾನು ಮುಷ್ತಾಕ್ ಜೊತೆ ಅನುವಾದಕಿ ದೀಪಾ ಭಾಸ್ತಿ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ಬಾಣು ಅವರನ್ನು ಮಾತ್ರ ಆಹ್ವಾನಿಸಿ, ದೀಪಾ ಅವರನ್ನು ಕೈ ಬಿಟ್ಟಿರುವುದು ಯಾಕೆ?
ಇದರಲ್ಲಿ ಕಾಂಗ್ರೆಸ್ ಅಜೆಂಡಾ ಏನು? ಎಂದು ಕೇಳಿದರು.
ಬಾನು ಮುಷ್ತಾಕ್ ನಮ್ಮ ಸಂಸ್ಕೃತಿ, ಪರಂಪರೆ, ಎಲ್ಲ ಆಚಾರ ವಿಚಾರಗಳನ್ನು ಒಪ್ಪಿ ಬರುವುದಾದರೆ ನಮ್ಮ ಸ್ವಾಗತವಿದೆ ಎಂದರು.
ಮಂಗಳೂರು ಘಟನೆ:
ಗೃಹ ಸಚಿವರು ಮಂಗಳೂರಿಗೆ ಹೋಗಿದ್ದಾಗ ದ್ದರು. ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲು ಒಂದು ಕೋಮಿಗೆ ಸೇರಿದ ನಾಯಕರು ವಿರೋಧಿಸಿದ್ದರು. ಪ್ರತಿ ಸಂದರ್ಭದಲ್ಲೂ ಹಿಂದೂಗಳಿಗೆ ಅಪಮಾನ ಮಾಡುತ್ತಿರುವುದು ಖಂಡನೀಯ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿಂದೂಗಳನ್ನು 24 ಗಂಟೆಗಳಲ್ಲಿ ಬಂಧಿಸುತ್ತಾರೆ. ಆದರೆ, ಧರ್ಮಸ್ಥಳದ ವಿಷಯದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದರೂಯಾರ ಮೇಲೂ ಕೇಸ್ ಹಾಕಿ ಬಂಧಿಸಲಿಲ್ಲ ಎಂದರು.
ಧರ್ಮಸ್ಥಳ ಪ್ರಕರಣದ ಹಿಂದಿರುವ ದುಷ್ಟ ಶಕ್ತಿಗಳ ಬಗ್ಗೆ ತಿಳಿಯಲು ಎನ್‌ಐಎ, ಸಿಬಿಐ ತನಿಖೆ ಆಗಬೇಕೆಂದು ಆಗ್ರಹಿಸಿದರು.