

ಚಾಮರಾಜನಗರ: ರೈತರ ಅರ್ಥಿಕ ಸದೃಢತೆಗೆ ಶ್ರೀಗಂಧ ಪೂರಕ ಬೆಳೆಯಾಗಿದ್ದು, ಶ್ರೀಗಂಧ ಬೆಳೆ ಬೆಳೆಯುವ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀಗಂಧ ಬೆಳೆಗಾರರೊಂದಿಗೆ ಸಮಾಲೋಚನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಗಂಧ ಬೆಳೆಯುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಅಮರನಾರಾಯಣ್ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಪ್ರವಾಸ ಮಾಡುತ್ತಿದ್ದು, ರೈತರ ಸಂಕಷ್ಟ ನಿವಾರಣೆಗಾಗಿ ಚಾಮರಾಜನಗರ ಜಿಲ್ಲೆಗೂ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಂಧ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಕ್ರಮ ವಹಿಸಲಾಗುವುದು ಎಂದರು.
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್. ಅಧಿಕಾರಿ ಕೆ. ಅಮರನಾರಾಯಣ ಮಾತನಾಡಿ, ಚಾಮರಾಜನಗರ ಮೈಸೂರಿನ ಅಂಗವಾಗಿದ್ದಾಗ ಜಿಲ್ಲೆಯಲ್ಲಿ ಶ್ರೀಗಂಧ ಬೆಳೆ ಹೆಚ್ಚಾಗಿತ್ತು. ಈಗ ಅದರ ಸಂಖ್ಯೆ ಕ್ಷೀಣವಾಗಿದೆ. ದೀರ್ಘಕಾಲಿಕ ಬೆಳೆಯಾಗಿರುವ ಶ್ರೀಗಂಧ ಅತ್ಯಂತ ಬೆಲೆ ಬಾಳುವ ಮರವಾಗಿದ್ದು, ಸಾವಿರ ವರ್ಷಗಳವರೆಗೂ ಬೇಡಿಕೆ ಇರುತ್ತದೆ. ರೈತರು ಶ್ರೀಗಂಧ ಬೆಳೆಯುವುದರಿಂದ ಪರಿಸರ ಅಭಿವೃದ್ಧಿಯಾಗಲಿದೆ. ಒಂದು ಶ್ರೀಗಂಧ ಮರ ಒಂದು ಸಾವಿರ ಮರಗಳನ್ನು ಹುಟ್ಟು ಹಾಕಬಲ್ಲದು. ಶ್ರೀಗಂಧ ಬೆಳೆಯಲು 2001-02ರಿಂದಲೂ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಶ್ರೀಗಂಧ ಬೆಳೆಯಲು ಜನರು ಭಯಬೀಳುವ ಪರಿಸ್ಥಿತಿ ಎದುರಾಗಿದೆ. ಕೃಷಿ ಬೆಳೆಗಳ ಜೊತೆಗೆ ಶ್ರೀಗಂಧ ಬೆಳೆಯಲು ಅರಣ್ಯ ಇಲಾಖೆ ರೈತರಿಗೆ ಅನುಮತಿ ನೀಡಿ ನೆರವಾಗಬೇಕು. ಶ್ರೀಗಂಧವನ್ನು ತೋಟಗಾರಿಕಾ ಬೆಳೆಯಾಗಿಸಲು ಸರ್ಕಾರದಿಂದ ಅನುಮತಿ ನಿರೀಕ್ಷಿಸಲಾಗಿದೆ. ರೈತರಿಗೆ ಶ್ರೀಗಂಧ ಮರ ಕತ್ತರಿಸಲು, ಸಾಗಣೆ, ಶೇಖರಣೆ ಹಾಗೂ ಮಾರಾಟ ಮಾಡಲು ನಿರ್ಬಂಧವಿದೆ. ಈ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಇತರ ಜಿಲ್ಲೆಯಿಂದ ಆಗಮಿಸಿದ್ದ ರೈತರೊಂದಿಗೆ ಸಂವಾದ ನಡೆಯಿತು. ರೈತರು ಶ್ರೀಗಂಧ ಬೆಳೆಯಲು ಇರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಕೂಡ ರೈತರಿಗೆ ಹಲವು ಪರಿಹಾರೋಪಾಯಗಳನ್ನು ತಿಳಿಸಿದರು. ರೈತರೊಂದಿಗೆ ಸಂವಾದಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದ ಅವರಣದಲ್ಲಿ ಗಣ್ಯರು ಶ್ರೀಗಂಧ ಸಸಿ ನೆಟ್ಟು ನೀರೆರೆದರು.
ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ನಿವೃತ್ತ ಐಪಿಎಸ್ ಅಧಿಕಾರಿ ಯು.ಶರಣಪ್ಪ, ಬಸವರಾಜಪ್ಪ ಇತರರು ಉಪಸ್ಥಿತರಿದ್ದರು.