ಚಾಮರಾಜನಗರ : ದೇಶದಲ್ಲಿ ರೈತ ಸಂಘಟನೆಯನ್ನು ಹುಟ್ಟುಹಾಕಿ ರೈತರ ಹೋರಾಟಕ್ಕೆ ದಾರಿತೋರಿಸಿದ ಕೀರ್ತಿ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ರೈತಮುಖಂಡ ಎಚ್.ಸಿ.ಮಹೇಶ್‌ಕುಮಾರ್ ತಿಳಿಸಿದರು.
ತಾಲೂಕಿನ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಹನುಮ ಸಂಜೇವಿನಿ ಔಷಧಾಲಯ, ಓಂಕಾರ್ ಓರ್ಮಿ ಕಾಂಪೋಸ್ಟ್ ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ 150 ದೇಶಗಳ ಜನರು ಪ್ರೊ.ನಂಜುಂಡಸ್ವಾಮಿ ಅವರ ಹೋರಾಟವನ್ನು ಸ್ಮರಿಸುತ್ತಿದ್ದಾರೆ. ಸುಮಾರು 40 ವರ್ಷಗಳ ಹಿಂದೆಯೇ ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿರುವ ಕಪ್ಪು ಹಣವನ್ನು ತರಲು ಅವರು ಹೋರಾಟ ನಡೆಸಿದ್ದರು. ಈ ಮೂಲಕ ರೈತರಿಗೆ ಬಹುದೊಡ್ಡ ಧ್ವನಿಯಾಗಿದ್ದರು. ದೇಶದಲ್ಲಿ ಬಲಿಷ್ಠವಾಗಿ ರೈತ ಸಂಘಟನೆ ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ರೈತ ಮುಖಂಡ ಶಿವಕುಮಾರ್ ಮಾತನಾಡಿ, ರೈತರನ್ನು ಸ್ವಾವಲಂಬಿಯಾಗಿಸಿದ ಕೀರ್ತಿ ಎಂಡಿಎನ್ ಅವರಿಗೆ ಸಲ್ಲುತ್ತದೆ. ತಮ್ಮ ಹೋರಾಟಗಳ ಮೂಲಕ ಅಧಿಕಾರಿಗಳು ಇರುವುದು ಜನರ ಸೇವೆಗಾಗಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ರೈತರು ಸ್ವಾಭಿಮಾನದ ಬದುಕನ್ನು ನಡೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 140 ಆನ್‌ಲೈನ್ ಸೇವೆಗಳನ್ನು ಸಾರ್ವಜನಿಕರಿಗೆ ಮಾಡಿಕೊಡಲಾಯಿತು. ಸುಮಾರು 13 ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಈ ವೇಳೆ ರೈತ ಮುಖಂಡ ಶಾಂತವೀರಪ್ಪ, ಶ್ರೀಕಂಠಶರ್ಮ, ಶ್ರೀಧರ್, ಡಾ.ಅಮೃತ, ಡಾ.ದಿವ್ಯಾ, ಮಂಗಳಮ್ಮ, ಸರಸ್ವತಿ, ಸಿದ್ದಪ್ಪಾಜಿ, ಪೂರ್ಣಿಮಾ, ಮಹೇಶ್, ಅಜಯ್, ಓಂಕಾರ್ ಹಾಗೂ ಇತರರು ಹಾಜರಿದ್ದರು.