ಖಾಲಿ ಕೊಡ ಹಿಡಿದು ಪ್ರತಿಭಟನೆ

15rajesh2
Published on

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 165ನೇ ದಿನವಾದ ಗುರುವಾರ ಕೂಡಾಹೋರಾಟವನ್ನು ಮುಂದುವರೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಹೆದ್ದಾರಿಯಲ್ಲಿ ಗುಂಪುಗೂಡಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಖಾಲಿ ಕೊಡಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕಕ್ಕೆ ಭೀಕರ ಬರಗಾಲ ಆವರಿಸುತ್ತಿದೆ. ಮಳೆ ಇಲ್ಲ, ಜಲಾಶಯಗಳು ಸಂಪೂರ್ಣ ಬತ್ತಿ ಹೋಗಿವೆ. ಇಂತಹ ಸಂದರ್ಭದಲ್ಲೂ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಇನ್ನೂ ನಾಟಕವಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಈಗಲಾದರೂ ಮಧ್ಯ ಪ್ರವೇಶ ಮಾಡಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಜಾಗೊಳಿಸಬೇಕು. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಗು.ಪುರುಷೋತ್ತಮ್, ನಿಜಧ್ವನಿ ಗೋವಿಂದರಾಜ್, ಚಾ.ವೆಂ.ರಾಜ್‌ಗೋಪಾಲ್, ಚಾ.ರ.ಕುಮಾರ್, ವೀರಭದ್ರ, ಚಾ.ವೆಂ.ಲೋಕೇಶ್, ಸೋಮವಾರಪೇಟೆ ಭೂಪತಿ, ಸೋಮವಾರಪೇಟೆ ಮಂಜು, ವೆಂಕಟಯ್ಯನ ಛತ್ರದ ಸತೀಶ್, ನಂಜುಂಡಸ್ವಾಮಿ ಮತ್ತು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net