ಪ್ರಬುದ್ಧ ಭಾರತಕ್ಕೆ ರಮಾಬಾಯಿ ದಾರಿದೀಪ

07chn2
Published on

ಚಾಮರಾಜನಗರ : ದೇಶವನ್ನು ಪ್ರಬುದ್ಧ ಭಾರತವನ್ನಾಗಿ ರೂಪಿಸಲು ರಮಾಬಾಯಿ ನಮ್ಮೆಲ್ಲರಿಗೂ ದಾರಿದೀಪವಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಂಸ ಥಿಯೇಟರ್, ರಂಗಧರ್ಮ ಸಾಂಸ್ಕೃತಿಕ ಸಂಸ್ಥೆ ಹಾಗೂ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಭೀಮಯಾನ ಅರಿವಿನ ಪಯಣ, 125 ದಿನಗಳ ರಂಗಜಾಥಾ ಮತ್ತು ಮಿಸಸ್ ಅಂಬೇಡ್ಕರ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪತಿ ಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಂಡ ರಮಾಬಾಯಿ ಅವರು ಅಂಬೇಡ್ಕರ್‌ಗೆ ಬಹುದೊಡ್ಡ ಶಕ್ತಿಯಾಗಿದ್ದರು. ಇಡೀ ಸಂಸಾರದ ನೊಗವನ್ನು ಹೊತ್ತುಕೊಂಡು ಅಪಾರ ನೋವನ್ನು ಅನುಭವಿಸಿದರು. ಈ ನಿಟ್ಟಿನಲ್ಲಿ ನಾವು ರಮಾಬಾಯಿ ಅವರ ಜೀವನ ಸಾರವನ್ನು ವಾಸ್ತವದ ನೆಲೆಯಲ್ಲಿ ಸಾಂಸ್ಕೃತಿಕವಾಗಿ ಕಟ್ಟಿಕೊಡಬೇಕಿದೆ ಎಂದರು.

ಕಾರ್ಯಶುದ್ಧಿ ಇಲ್ಲದಂತಹ ರಾಷ್ಟ್ರೀಯತೆ ಅತ್ಯಂತ ತಪ್ಪು ವ್ಯಾಖ್ಯಾನವಾಗಿದೆ. ಈಗಲಾದರೂ ದೇಶಕ್ಕೆ ಸರಿಯಾದ ನೋಟವನ್ನು ಕೊಡುವ ಕೆಲಸ ಮಾಡಬೇಕು. ಈ ದೇಶಕ್ಕೆ ಬೇಕಾಗಿರುವುದು ಒಂದು ಕನಸು ಮತ್ತು ನಗು ಮಾತ್ರ ಎಂದರು. ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಹಿಂದೆ ರಮಾಬಾಯಿ ಬಹುದೊಡ್ಡ ಶಕ್ತಿಯಾಗಿ ನಿಂತಿದ್ದರು. ಪ್ರಸ್ತುತ ಸಮಾಜದಲ್ಲಿ ಚರಿತ್ರೆ ತಿದ್ದುವ, ಸುಳ್ಳನ್ನು ಸತ್ಯವಾಗಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಚಾಮರಾಜನಗರ ವಿವಿ ಕುಲಸಚಿವ ಪ್ರೊ.ಪಿ.ಮಾದೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಬಸವರಾಜು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಸಂಸ ಥಿಯೇಟರ್ ಸಂಚಾಲಕ ಸಿ.ಎಂ.ಸುರೇಶ್, ರಂಗಧರ್ಮ ಸಾಂಸ್ಕೃತಿಕ ಸಂಸ್ಥೆಯ ಪ್ರದೀಪ್‌ಕುಮಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net