

ಚಾಮರಾಜನಗರ: ಮುಂಬರುವ ಲೋಕಸಭೆ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಮಾಡಿಕೊಂಡಿರುವ ‘ಮೈತ್ರಿ’ ಜಾತಕ ಗಡಿಜಿಲ್ಲೆ ಚಾಮರಾಜನಗರದಲ್ಲಿ ವಿಭಿನ್ನವಾಗಿದ್ದು, ಟಿಕೆಟ್ ಹಂಚಿಕೆ ನಂತರ ಹೊಂದಾಣಿಕೆ ಹೇಗಿರಬಹುದೆಂದು ಕಾದು ನೋಡಬೇಕಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರ ನಡುವೆ ಮೈತ್ರಿ ನಡೆದಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಹೊಂದಾಣಿಕೆ ಸುಲಭವಾಗಿಲ್ಲ. ಜಿಲ್ಲೆಯಲ್ಲಿ ಅದರಲ್ಲೂ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಗೆದ್ದಿರುವ ಏಕೈಕ ಕ್ಷೇತ್ರ ಹನೂರು. ಆ ಕ್ಷೇತ್ರದಿಂದ ಗೆದ್ದಿರುವ ಶಾಸಕ ಎಂ.ಆರ್.ಮಂಜುನಾಥ್ ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಕೊಳ್ಳೇಗಾಲ ಮಾಜಿ ಶಾಸಕ ಎನ್.ಮಹೇಶ್ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿದ್ದರೂ ಮೈತ್ರಿ ಇನ್ನೂ ರಾಜ್ಯ ಮಟ್ಟದಲ್ಲೇ ಇದೆಯೇ ಹೊರತು ಜಿಲ್ಲಾ ಮಟ್ಟಕ್ಕೆ ಇನ್ನೂ ಇಳಿದಿಲ್ಲ. ಟಿಕೆಟ್ ಹಂಚಿಕೆಯಾಗುವವರೆಗೂ ಎರಡೂ ಪಕ್ಷಗಳ ನಡುವೆ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಕಾಣುವುದಿಲ್ಲ ಎನ್ನುವಂತಿದೆ.
ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹೇಗೆ ಇರಲಿದೆ ಎನ್ನುವುದನ್ನು ನೋಡುವುದೇ ಕುತೂಹಲಕಾರಿ. ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಮತ್ತು ಜೆಡಿಎಸ್ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ನಡುವೆ ಘರ್ಷಣೆ ಏರ್ಪಟ್ಟಿತ್ತು. ಗುಂಡ್ಲುಪೇಟೆಯಲ್ಲಿ ಹಿಂದಿನ ಶಾಸಕ ಸಿ.ಎಸ್.ನಿರಂಜನ್‌ಕುಮಾರ್‌ಗೆ ಸ್ನೇಹಿತರೇ ಆಗಿದ್ದ ಕಡಬೂರು ಮಂಜುನಾಥ್ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದರು. ಈಗ ಇವರೆಲ್ಲ ಮೈತ್ರಿ ಹೆಸರಿನಲ್ಲಿ ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸಬೇಕಾಗಿದೆ.
ಇನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ
ಜಿಲ್ಲೆಯಲ್ಲಿ ನಮ್ಮ ಪಕ್ಷದವರನ್ನು ಬಿಜೆಪಿಯವರು ಇನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಪಕ್ಷದ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವೆ. ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಹಾಗಾಗಿ ನಾವು ತಟಸ್ಥವಾಗಿ ಉಳಿದುಕೊಂಡಿದ್ದೇವೆ ಎಂದು ವಿಧಾನಸಭೆ ಚುನಾವಣೆ ಜೆಡಿಎಸ್ ಪರಾಜಿತ ಅಭ್ಯರ್ಥಿ ಆಲೂರು ಮಲ್ಲು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಬಿಜೆಪಿಗೆ ಎಂಪಿ ಟಿಕೆಟ್
ಚಾಮರಾಜನಗರ ಲೋಕಸಭಾ ಕ್ಷೇತ್ರ ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ(ಎಸ್ಸಿ ಮೀಸಲು) ಮತ್ತು ನಂಜನಗೂಡು(ಎಸ್ಸಿ ಮೀಸಲು), ತಿ.ನರಸೀಪುರ,(ಎಸ್ಸಿ ಮೀಸಲು), ಎಚ್.ಡಿ.ಕೋಟೆ(ಎಸ್ಟಿ ಮೀಸಲು), ವರುಣ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್, 1ರಲ್ಲಿ ಜೆಡಿಎಸ್ ಜಯ ಗಳಿಸಿತು.
ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿ ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್ ಇದ್ದಾರೆ. ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಸೋತಿದ್ದರೂ ಗಟ್ಟಿ ನೆಲೆ ಇದೆ. ಜೆಡಿಎಸ್ ಹನೂರು ಕ್ಷೇತ್ರವನ್ನು ಹೊರತುಪಡಿಸಿ ಜಿಲ್ಲೆಯ ಉಳಿದ ಕಡೆಗಳಲ್ಲಿ ಸಂಘಟನಾ ಹಂತದಲ್ಲಿದೆ. ಟಿಕೆಟ್ ಹಂಚಿಕೆ ಲೆಕ್ಕಾಚಾರದಲ್ಲಿ ಬಿಜೆಪಿಗೆ ಚಾಮರಾಜನಗರ ಸಿಗುವುದಲ್ಲಿ ಅನುಮಾನವೇ ಇಲ್ಲ.
ವಿಧಾನಸಭೆ ಚುನಾವಣೆ
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಗೆದ್ದು ಶಾಸಕರಾಗಿದ್ದಾರೆ. ಉಳಿದಂತೆ ಚಾಮರಾಜನಗರದಲ್ಲಿ ಆಲೂರು ಮಲ್ಲು, ಕೊಳ್ಳೇಗಾಲದಲ್ಲಿ ಬಿ.ಪುಟ್ಟಸ್ವಾಮಿ, ಗುಂಡ್ಲುಪೇಟೆಯಲ್ಲಿ ಕಡಬೂರು ಮಂಜುನಾಥ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಗುಂಡ್ಲುಪೇಟೆಯಲ್ಲಿ ಸಿ.ಎಸ್.ನಿರಂಜನ್ ಕುಮಾರ್, ಕೊಳ್ಳೇಗಾಲದಲ್ಲಿ ಎನ್.ಮಹೇಶ್, ಚಾಮರಾಜನಗರದಲ್ಲಿ ವಿ.ಸೋಮಣ್ಣ, ಹನೂರಿನಲ್ಲಿ ಪ್ರೀತನ್ ನಾಗಪ್ಪ ಸೋತರು.
ಕಾಣಲಿಲ್ಲ ಒಗ್ಗಟ್ಟಿನ ಹೋರಾಟ
ಮಂಡ್ಯದ ಕೆರಗೋಡಿನ ಧ್ವಜ ವಿವಾದದ ವಿರುದ್ಧ ಬಿಜೆಪಿ-ಜೆಡಿಎಸ್ ಹೋರಾಟ ನಡೆಸುತ್ತಿದೆ. ಈ ಒಗ್ಗಟ್ಟಿನ ಹೋರಾಟ ಚಾಮರಾಜನಗರದಲ್ಲಿ ಕಾಣಲಿಲ್ಲ. ಇಲ್ಲೂ ಪಕ್ಷದ ಸೂಚನೆ ಪ್ರಕಾರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಆದರೆ ಜೆಡಿಎಸ್‌ನವರು ಕಾಣಸಿಗಲಿಲ್ಲ.
ಸೂಚನೆ ಬಂದಿಲ್ಲ
ಬಿಜೆಪಿ-ಜೆಡಿಎಸ್ ಒಗ್ಗೂಡಿ ಹೋಗುವ ಕುರಿತು ನಮಗೆ ಇನ್ನೂ ಯಾವುದೇ ರೀತಿಯ ಸೂಚನೆ ಬಂದಿಲ್ಲ. ರಾಜ್ಯದ ನಮ್ಮ ನಾಯಕರು ಜೆಡಿಎಸ್‌ನವರನ್ನು ಸಂಪರ್ಕಿಸಿ, ಜತೆಗೆ ಕರೆದುಕೊಂಡು ಹೋಗಿ ಎಂದು ಇನ್ನೂ ಹೇಳಿಲ್ಲ ಎಂದು ಗುಂಡ್ಲುಪೇಟೆ ಮಾಜಿ ಶಾಸಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಹೇಳಿದ್ದಾರೆ.
ಬಿಜೆಪಿಯವರು ಬರದೆ ನಾವು ಹೇಗೆ ಒಗ್ಗಟ್ಟಾಗಿ ಹೋಗೋದು. ಇನ್ನೂ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ.ಎಂ.ಆರ್.ಮಂಜುನಾಥ್, ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನವರು ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ. ಇದರಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಟಿಕೆಟ್ ಹಂಚಿಕೆ ಅಂತಿಮಗೊಳ್ಳಲಿ ಎಂದು ಕಾಯುತ್ತಿದ್ದೇವೆ.ಎನ್.ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಕೊಳ್ಳೇಗಾಲ ಮಾಜಿ ಶಾಸಕ