ಹೈಕೋರ್ಟ್ ಆದೇಶದಂತೆ ಟ್ರಸ್ಟ್‌ಗೆ ದೇವಸ್ಥಾನ ಒಪ್ಪಿಸಿ

Published on

ಚಾಮರಾಜನಗರ: ಹೈಕೋರ್ಟ್ ಆದೇಶದಂತೆ ಉಮ್ಮತ್ತೂರು ಗ್ರಾಮದ ಶ್ರೀಉರುಕಾತೇಶ್ವರಿ ದೇವಸ್ಥಾನದ ಕೀ ಹಾಗೂ ಬ್ಯಾಂಕ್ ಖಾತೆಯನ್ನು ನಿರ್ವಹಿಸುವ ಅಧಿಕಾರವನ್ನು ತಾಲೂಕು ಆಡಳಿತ ನೀಡದಿದ್ದರೆ ಮಂಗಳವಾರ ನ್ಯಾಯಾಲಯದ ಆದೇಶದಂತೆ ದೇವಸ್ಥಾನ ಬೀಗ ಒಡೆದು ಪೂಜೆ ಸಲ್ಲಿಸುವುದಾಗಿ ಶ್ರೀಉರುಕಾತೇಶ್ವರಿ ಅಮ್ಮನವರ ದೇವಸ್ಥಾನ ಮಂಡಳಿ ಅಧ್ಯಕ್ಷ ಎಸ್.ಗುರುಮಲ್ಲಪ್ಪ ಎಚ್ಚರಿಸಿದರು.

ಆಡಳಿತ ಮಂಡಳಿ ವಶದಲ್ಲಿದ್ದ ದೇವಸ್ಥಾನವನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ಮುಜರಾಯಿಗೆ ವಹಿಸಿತ್ತು. ಶ್ರೀ ಉರುಕಾತೇಶ್ವರಿ ಅಮ್ಮನವರ ಭಕ್ತರ ಆಶಯದಂತೆ ಟ್ರಸ್ಟ್ ರಚನೆ ಮಾಡಿಕೊಂಡು ಯಾವುದೇ ಲೋಪವಿಲ್ಲದೆ, ಭ್ರಷ್ಟಾಚಾರ ಇಲ್ಲದೆ, ಹಣ ದುರುಪಯೋಗ ಮಾಡದೆ ನಿರ್ವಹಣೆ ಮಾಡಿಕೊಂಡು ಬರಲಾಗಿತ್ತು. ಆದರೆ ಜಿಲ್ಲಾಡಳಿತ ಕೆಲವರ ಮಾತು ಕೇಳಿ ಟ್ರಸ್ಟ್ ವಶದಲ್ಲಿದ್ದ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೋರೆ ಹೋಗಿದ್ದು, ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡು ಅಂತಿಮವಾಗಿ 2024ರ ಜ.18 ರಂದು ಆದೇಶ ಹೊರಡಿಸಿ, ಮುಜರಾಯಿ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶವನ್ನು ರದ್ದುಪಡಿಸಿದೆ. ನ್ಯಾಯಾಧೀಶರ ಆದೇಶದಂತೆ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನ ಮಂಡಳಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.

ಉಚ್ಚ ನ್ಯಾಯಾಲಯವು ದೇವಸ್ಥಾನದ ಬೀಗದ ಕೀ, ಸಂಗ್ರಹವಾಗಿರುವ ಕಾಣಿಕೆ, ಹುಂಡಿ ಹಣ, ದೇವಸ್ಥಾನಕ್ಕೆ ಸಂಬಂಧಪಟ್ಟ ಇನ್ನಿತರ ವಸ್ತುಗಳನ್ನು ಹಾಗೂ ದೇವಸ್ಥಾನದ ಎಲ್ಲ ರೀತಿಯ ಚಟುವಟಿಕೆಗಳನ್ನು ಟ್ರಸ್ಟ್‌ನವರಿಗೆ ನೀಡಬೇಕೆಂದು ಆದೇಶಿಸಿದೆ. ಅದರಂತೆ ನ್ಯಾಯಾಲಯದ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಸಲ್ಲಿಸಿದ್ದೇವೆ. ನಮ್ಮ ಮನವಿ ಹಾಗೂ ಹೈಕೋರ್ಟ್ ಆದೇಶದಂತೆ ಅಪರ ಜಿಲ್ಲಾಧಿಕಾರಿಗಳು ಜ.29ರಂದೇ ತಹಸೀಲ್ದಾರ್‌ಗೆ ಪತ್ರ ಬರೆದು ಉಮ್ಮತ್ತೂರು ದೇವಸ್ಥಾನದ ಕೀಲಿ ಕೈ, ದೇವಸ್ಥಾನ ಬ್ಯಾಂಕ್ ಖಾತೆಯನ್ನು ನಿರ್ವಹಿಸಲು ಟ್ರಸ್ಟ್‌ನವರಿಗೆ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದಾರೆ. ಆದರೆ ದೇವಸ್ಥಾನದ ನಿರ್ವಹಣೆ ಜವಾಬ್ದಾರಿಯನ್ನು ಟ್ರಸ್ಟ್ ಪದಾಧಿಕಾರಿಗಳಿಗೆ ವಹಿಸದೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಆಪಾದಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಸಿದ್ದರಾಜಪ್ಪ, ಖಜಾಂಚಿ ಎಂ. ರಾಜೇಶ್, ಟ್ರಸ್ಟಿಗಳಾದ ಮಹದೇವಸ್ವಾಮಿ, ಕೆ. ರಾಮಣ್ಣ, ಎಸ್. ಉಮೇಶ್, ಲೋಕೇಶ್, ಸಿದ್ದಪ್ಪ, ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net