

ಚಾಮರಾಜನಗರ: 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವ ಒಬ್ಬರಾಗಿದ್ದಾರೆ. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಎಂದು ಚಾಮರಾಜನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಬೇಗೂರು ಗ್ರಾಮದ ಮಡಿವಾಳ ಬೀದಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವೀರ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ. ಶರಣರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ, ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಮಾಚಿದೇವರು 354 ವಚನಗಳನ್ನು ಬರೆದಿದ್ದಾರೆ ಎಂದರು. ಸಾಹಿತಿ ಹರವೆ ಮಹದೇವಸ್ವಾಮಿ ಪ್ರವಚನ ನೀಡಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಪಿ.ಸೋಮಶೇಖರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗುರುಸ್ವಾಮಿ, ಗೌಡಿಕೆ ಪ್ರಸಾದ್, ಜನಾಂಗದ ಯಜಮಾನ ಪುಟ್ಟಣ್ಣ, ಗ್ರಾಮದ ಎಲ್ಲ ಕೋಮಿನ ಯಜಮಾನರು ಹಾಗೂ ಮುಖಂಡರು ಹಾಜರಿದ್ದರು.