

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಭಕ್ತರ ಧಾರ್ಮಿಕ ನಂಬಿಕೆಯ ಆಹಾರ ಸೇವನೆಗೆ ಅಡ್ಡಿಪಡಿಸುವ ಮೂಲಕ ಜಿಲ್ಲಾಡಳಿತ ಲಕ್ಷಾಂತರ ಭಕ್ತರ ನಂಬಿಕೆಯನ್ನು ಕಸಿದಿದೆ ಎಂದು ಸಾಹಿತಿ, ಸಂಸ್ಕೃತಿ ಚಿಂತಕ ಶಂಕನಪುರ ಮಹಾದೇವ ಖಂಡಿಸಿದರು.
ಐತಿಹಾಸಿಕ ಪರಂಪರೆಯನ್ನು ಒಳಗೊಂಡಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾಂವಿಧಾನಿಕ ಆಚರಣೆಗೆ ಅಡ್ಡಿಪಡಿಸದಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ವಿಶ್ವ ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ದಯಾನಂದ ಸ್ವಾಮೀಜಿ ಅವರ ಮಾತಿಗೆ ಜಿಲ್ಲಾಡಳಿತ ಮನ್ನಣೆ ನೀಡಿ ಮಂಟೇಸ್ವಾಮಿ, ಸಿದ್ದಪ್ಪಾಜಿ ಒಕ್ಕಲಿನ ಲಕ್ಷಾಂತರ ಭಕ್ತರ ಧಾರ್ಮಿಕ ನಂಬಿಕೆಯ ಆಹಾರದ ಹಕ್ಕನ್ನು ಕಸಿದಿದೆ ಎಂದು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶ್ರೀಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಕುಲ 18 ಜಾತಿಗಳ ಭಕ್ತರನ್ನು ಒಳಗೊಂಡಿರುವ ಪ್ರತೀಕವಾಗಿದೆ. ಜಾತ್ಯತೀತವಾದ ಚಿಕ್ಕಲ್ಲೂರು ಜಾತ್ರೆಯ ಪಂಕ್ತಿಸೇವೆಯಲ್ಲಿ ನಾವೆಲ್ಲರೂ ಸಮಾನತೆ ಕಾಣುತ್ತೇವೆ. ಇಂತಹ ಜಾತ್ರೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ವಿಫಲವಾದ ಜಿಲ್ಲಾಡಳಿತ, ದಯಾನಂದ ಸ್ವಾಮೀಜಿಯನ್ನು ವಾಹನದಲ್ಲಿ ಕೂರಿಸಿಕೊಂಡು ಪೊಲೀಸರೇ ಸಹಕರಿಸಿ ಜಾತ್ರೆಯಲ್ಲಿ ಗೊಂದಲ ಉಂಟುಮಾಡಿದ್ದಾರೆ. ಈ ಮೂಲಕ ಸಾಂವಿಧಾನಿಕ ಅಡಿಯಲ್ಲಿ ನಡೆಯುವ ಜಾತ್ರೆಗೆ ಕಳಂಕ ತರುವ ಕೆಲಸ ಮಾಡಲಾಗಿದೆ ಎಂದು ಬೇಸರ ಹೊರಹಾಕಿದರು.
ಶ್ರೀಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರ ನರಸಿಂಹಗೌಡ ಮಾತನಾಡಿ, 2017ರಲ್ಲಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಂತೆ ಭಕ್ತರ ಧಾರ್ಮಿಕ ಆಚರಣೆಯಾದ ಆಹಾರ ಸೇವನೆಗೆ ಅಡ್ಡಿಪಡಿಸಬಾರದು ಎಂಬುದಕ್ಕೆ ಧಕ್ಕೆ ಉಂಟಾಗಿದೆ. ಈ ಮೂಲಕ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆಯುವ ಚಿಕ್ಕಲ್ಲೂರು ಜಾತ್ರೆಗೆ ಕಳಂಕ ಹಚ್ಚುವ ಕೆಲಸವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಬಹುದೊಡ್ಡ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು. ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಸದಸ್ಯ ಸೋಮಲಿಂಗಸ್ವಾಮಿ, ಸಂಶೋಧನಾರ್ಥಿ ನಾಗೇಶ್ ಹಾಜರಿದ್ದರು.