

ಚಾಮರಾಜನಗರ: ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆಕ್ಸಿಜನ್ ದುರಂತದ ಸಂತ್ರಸ್ತರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಆಕ್ಸಿಜನ್ ದುರಂತದ 10ಕ್ಕೂ ಹೆಚ್ಚು ಸಂತ್ರಸ್ತರು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸ್ಟೆಲ್‌ಗಳಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಲು ಸಮಾಜ ಕಲ್ಯಾಣ ಇಲಾಖೆಯಿಂದ ಕರೆ ಬಂದಿದೆ. ಈ ಕೆಲಸ ಮಾಡಲು ನಮಗೆ ಆಸಕ್ತಿ ಇಲ್ಲ. ಅಲ್ಲದೆ, ಹೊರಗುತ್ತಿಗೆ ನೌಕರಿ ಮಾಡಲೇಬೇಕೆಂದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಲಿಖಿತ ರೂಪದಲ್ಲಿ ಕೊಡಬೇಕು ಎಂದು ಹೇಳಿದರು.
ಈ ಕುರಿತು ಮೃತ ಸರೋಜಮ್ಮ ಅವರ ಪುತ್ರ ಅರುಣ್‌ಕುಮಾರ್ ಮಾತನಾಡಿ, ನನಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕರೆ ಮಾಡಿ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಲು ಹೇಳಿದರು. ನಾನು ಎಂಬಿಎ ಪದವೀಧರನಾಗಿದ್ದು, ಇದಕ್ಕೆ ಒಪ್ಪಲಿಲ್ಲ. ನನ್ನ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡಬೇಕು ಎಂದರು. ಇದೇ ರೀತಿ ಸಂತ್ರಸ್ತರಾದ ಸುನೀತಾ, ನಾಗರತ್ನ, ಕುಮಾರ್, ಸವಿತಾ, ಶ್ವೇತಾ, ಲಕ್ಷ್ಮೀ ಹೊರಗುತ್ತಿಗೆ ಕೆಲಸದಲ್ಲಿ ಅಡುಗೆ ಸಹಾಯಕಿಯರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಮೃತ ಮಹದೇವಪ್ಪ ಅವರ ಪುತ್ರ ಸಂತೋಷ್ ಮಾತನಾಡಿ, ಆಕ್ಸಿಜನ್ ದುರಂತ ಸರ್ಕಾರದಿಂದಲೇ ನಡೆದ ಕೊಲೆ. ಒಬ್ಬ ಮನುಷ್ಯ ಸತ್ತರೆ ಅವನನ್ನು ಕೊಂದವರಿಗೆ ಶಿಕ್ಷೆ ವಿಧಿಸುತ್ತಾರೆ. ಆದರೆ ನಮ್ಮ ಕುಟುಂಬದವರನ್ನು ಕೊಂದವರಿಗೆ ಶಿಕ್ಷೆಯಾಗುತ್ತಿಲ್ಲ. ಪರಿಹಾರ, ಉದ್ಯೋಗ ನೀಡುತ್ತೇವೆ ಎನ್ನುತ್ತಾರೆ. ಈಗ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಟ್ಟು ಮುಂದೆ ಕಾಂಗ್ರೆಸ್ ಸರ್ಕಾರವೇ ಬದಲಾಗಿ ಹೋದರೆ ನಾವು ಯಾರ ಬಳಿ ಹೋಗಿ ಸರ್ಕಾರಿ ಉದ್ಯೋಗ ಕೇಳಬೇಕು ಎಂದು ಪ್ರಶ್ನಿಸಿದರು.
ಮೃತ ಚಿಕ್ಕಮ್ಮ ಅಳಿಯ ಬಂಡಿಗೆರೆ ರವಿ ಮಾತನಾಡಿ, ನನ್ನ ಪತ್ನಿ ಕಾವ್ಯಾಗೆ ಅಡುಗೆ ಸಹಾಯಕಿ ಕೆಲಸ ಮಾಡಲು ಅಧಿಕಾರಿಗಳು ಕರೆ ಮಾಡಿದ್ದರು. ನಮಗೆ ಈ ಕೆಲಸಕ್ಕೆ ಕಳುಹಿಸಲು ಇಷ್ಟವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ನಮಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿತ್ತು. ಅದರೆ ಇನ್ನೂ ಹೊರಗುತ್ತಿಗೆ ನೌಕರಿ ಕೊಡುವುದರಲ್ಲೇ ಇದೆ. ಅದೂ ಸಂತ್ರಸ್ತರಿಗೆ ಒಪ್ಪಿಗೆ ಇಲ್ಲದ ಕೆಲಸವನ್ನು ಕೊಟ್ಟರೆ ಹೇಗೆ? ಆಕ್ಸಿಜನ್ ದುರಂತ ಸಂಭವಿಸಲು ಕಾರಣರಾದವರ ಮೇಲೆ ಕ್ರಮ ಕೈಗೊಂಡಿಲ್ಲ. ಸತ್ತವರು ಮನುಷ್ಯರಲ್ಲವಾ? ನಮಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ, ನಗರಸಭೆ ಸದಸ್ಯ ಅಬ್ರಾರ್ ಅಹಮ್ಮದ್ ಮಾತನಾಡಿ, ಸಂತ್ರಸ್ತರ ಅಭಿಪ್ರಾಯವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗಮನಕ್ಕೆ ತರೋಣ. ಈ ಸಭೆ ಮುಗಿದ ಬಳಿಕ ಎಡಿಸಿ ಗೀತಾ ಹುಡೇದಾ ಅವರನ್ನು ಭೇಟಿ ಮಾಡೋಣ ಎಂದು ಹೇಳಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ನಗರಸಭೆ ಸದಸ್ಯ ಗಾಳೀಪುರ ಮಹೇಶ್ ಮಾತನಾಡಿ, ಸಂತ್ರಸ್ತರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು ಮತ್ತು ಅಲ್ಲಿಯವರೆಗೂ ಈ ಕೆಲಸದಿಂದ ತೆಗೆಯುವುದಿಲ್ಲ ಎಂದು ಲಿಖಿತವಾಗಿ ನೀಡಬೇಕು. ಬಡತನ, ಜೀವನ ನಿರ್ವಹಣೆಯ ಅನಿವಾರ್ಯತೆ ಇರುವವರು ಸದ್ಯಕ್ಕೆ ಹೊರಗುತ್ತಿಗೆ ನೌಕರಿ ಮಾಡಲೇಬೇಕಿರುವ ಪರಿಸ್ಥಿತಿ ಇದೆ. ಇವರಿಗೂ ಮತ್ತು ಇತರರಿಗೂ ಭದ್ರತೆ ನೀಡಬೇಕು ಎಂದರು. ನಗರಸಭೆ ಸದಸ್ಯ ಕಲೀಲ್ ಇದ್ದರು.
ಎಡಿಸಿ ಭೇಟಿ ಮಾಡಿದ ಸಂತ್ರಸ್ತರು
ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರನ್ನು ಆಕ್ಸಿಜನ್ ದುರಂತದ ಸಂತ್ರಸ್ತರು ಭೇಟಿ ಮಾಡಿದರು. ಅಡುಗೆ ಸಹಾಯಕರ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಎಡಿಸಿ ಗೀತಾ ಹುಡೇದ ತಾಲೂಕು ಕಚೇರಿಗಳಲ್ಲಿ ಖಾಲಿ ಇರುವ ಕೆಲಸಗಳನ್ನು ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವುದರ ಮೂಲಕ ಸಕಾರಾತ್ಮಕ ಸ್ಪಂದನೆ ದೊರೆಯಿತು.