

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದ ಶ್ರೀ ಚನ್ನಿಗರಾಯ ಸ್ವಾಮಿ ದೇಗುಲವು ಸುಮಾರು 2 ಶತಮಾನಗಳ ಇತಿಹಾಸವನ್ನು ಹೊಂದಿದ್ದು, ಕಷ್ಟ ಕಾರ್ಪಣ್ಯವನ್ನು ನಿವಾರಿಸುವುದರ ಮೂಲಕ ಭಕ್ತರ ಪಾಲಿಗೆ ಆರಾಧ್ಯ ದೈವವೆನಿಸಿದ್ದಾನೆ.
ಇಂದಿನ ಹನೂರು ಪ್ರದೇಶ (ತಾಲೂಕು) ಹಿಂದೆ ತಂಜಾವೂರಿನ ಚೋಳರ ಆಳ್ವಿಕೆ ಒಳಪಟ್ಟಿದ್ದು, ಮದ್ರಾಸ್ ಪ್ರಾಂತ್ಯದ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ಅಂದಿನ ಕಾಲದಲ್ಲಿ ಶತ್ರುಗಳನ್ನು ಸದೆಬಡಿಯುವ ಸಲುವಾಗಿ ಚೋಳರು ಈ ಭಾಗಕ್ಕೆ ದಂಡೆತ್ತಿ ಬಂದಾಗ ತಮ್ಮ ದಿಗ್ವಿಜಯದ ನೆನಪಾರ್ಥವಾಗಿ ಹಾಗೂ ರಾಜ್ಯದ ಹಿಡಿತ ಸಾಧಿಸುವ ಸಲುವಾಗಿ ಪ್ರಾಂತ್ಯದ ಅಲ್ಲಲ್ಲಿ ದೇಗುಲಗಳನ್ನು ನಿರ್ಮಿಸುತ್ತಿದ್ದರು. ಜತೆಗೆ ಅಲ್ಲಲ್ಲಿ ಶಾಸನ ಹಾಗೂ ದೇವರ ಮೂರ್ತಿಗಳಿರುವುದನ್ನು ಕಾಣಬಹುದು. ಈ ದಿಸೆಯಲ್ಲಿ ಹನೂರು ಭಾಗದ ವೈಶಂಪಾಳ್ಯ, ಅಲಗುಮೂಲೆ, ಹೂಗ್ಯಂ ಹಾಗೂ ಶಾಗ್ಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಚೋಳರು ತಮ್ಮದೇ ಆದ ಕಲಾ ಶೈಲಿಯಲ್ಲಿ ದೇಗುಲವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಹಿಂದೆ ಶಿಲಾಪುರಿ, ಬನದಹಳ್ಳಿ ಎಂಬ ಹೆಸರಿನಿಂದ ಕರೆಯುತ್ತಿದ್ದ ಈಗಿನ ಬಂಡಳ್ಳಿ ಗ್ರಾಮದ ಶ್ರೀ ಚನ್ನಿಗರಾಯಸ್ವಾಮಿ ದೇಗುಲವು ಒಂದಾಗಿದೆ. ಈ ದೇಗುಲ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಚೋಳರ ಕಾಲದ ಇತಿಹಾಸವನ್ನು ನೆನಪಿಸುತ್ತದೆ. ಪ್ರಸ್ತುತ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದೆ.
ದೇಗುಲದ ವೈಶಿಷ್ಟೃತೆ
ದೇಗುಲವನ್ನು ಸೂರ್ಯ ಉದಯಿಸುವ ದಿಕ್ಕಿಗೆ ನಿರ್ಮಿಸಲಾಗಿದ್ದು, ಗರ್ಭಗುಡಿಯಲ್ಲಿ ಶ್ರೀದೇವಿ, ಭೂದೇವಿ ಮೂರ್ತಿ ಒಳಗೊಂಡಂತೆ ಶ್ರೀಚನ್ನಿಗರಾಯ ಸ್ವಾಮಿ ವಿಗ್ರಹಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಚಪ್ಪಡಿ ಕಲ್ಲಿನಿಂದ ನಿರ್ಮಿಸಿರುವ ದೇಗುಲದ ಗೋಪುರದಲ್ಲಿ ನಾರಾಯಣಸ್ವಾಮಿ, ಆಂಜನೇಯ, ಗಣಪತಿ ಸೇರಿದಂತೆ ವಿವಿಧ ದೇವರ ವಿಗ್ರಹ ಮೂರ್ತಿಗಳನ್ನು ನಯನ ಮನೋಹರವಾಗಿ ಕೆತ್ತನೆ ಮಾಡಲಾಗಿದೆ. ಇನ್ನು ದೇಗುಲದ ಆವರಣದಲ್ಲಿ ಆಂಜನೇಯ, ನಾಗರಕಲ್ಲು, ಗರುಡ ಸ್ತಂಭ ಹಾಗೂ ನವಗ್ರಹ ವಿಗ್ರಹಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸುತ್ತುಗೋಡೆಯನ್ನು ಸಹ ಚೋಳರ ವಾಸ್ತುಶಿಲ್ಪದ ಪದ್ಧತಿಯಂತೆ ನಿರ್ಮಿಸಲಾಗಿದೆ. ಹಾಗಾಗಿ ಈ ದೇಗುಲ ತನ್ನದೆಯಾದ ವೈಶಿಷ್ಟೃತೆಯನ್ನು ಹೊಂದಿದೆ.
ಪ್ರತಿ ಶನಿವಾರ ವಿಶೇಷ ಪೂಜೆ
ಚಪ್ಪಡಿ ಕಲ್ಲುಗಳಿಂದ ನಿರ್ಮಿಸಿರುವ ಈ ದೇಗುಲವು ಶಿಥಿಲಾವಸ್ಥೆಯ ಹಂತವನ್ನು ತಲುಪಿತ್ತು. ಈ ದಿಸೆಯಲ್ಲಿ ಕಳೆದ 4 ವರ್ಷದ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ. ಇಲ್ಲಿ ಪ್ರತಿ ಶನಿವಾರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಹಾಗೂ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯವನ್ನು ನೆರವೇರಿಸಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಜತೆಗೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಜರುಗುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ದೇಗುಲದಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಗುತ್ತಲ್ಲದೆ ವಿವಿಧ ಪುಷ್ಪಗಳಿಂದ ಸಿಂಗರಿಸಿದ ಗರುಡ ವಾಹನದಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಗ್ರಾಮದಲ್ಲಿ ವಿಜೃಂಭಣೆಯಿಂದ ಮೆರವಣಿಗೆಯನ್ನು ನಡೆಸಲಾಗುತ್ತದೆ. ಈ ದಿನದಂದು ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಭಕ್ತರ ಪಾಲಿನ ಆರಾಧ್ಯ ದೈವ
ಈ ದೇಗುಲಕ್ಕೆ ಗ್ರಾಮದ ಸುತ್ತೇಳು ಹಳ್ಳಿಯ ಜನರು ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಕಡೆಗಳ ಭಕ್ತರು ಆಗಮಿಸುತ್ತಿದ್ದಾರೆ. ಸಂತಾನ ಭಾಗ್ಯ ಇಲ್ಲದವರು, ಮನೆಯಲ್ಲಿ ಕಲಹ ಸೇರಿದಂತೆ ಇನ್ನಿತರ ದೋಷ ನಿವಾರಣೆ ಹಾಗೂ ಶುಭಕಾರ್ಯಗಳು ಯಾವುದೇ ವಿಘ್ನವಿಲ್ಲದೇ ನೆರವೇರಿಸುವಂತೆ ಬೇಡಿಕೊಳ್ಳುವುದರ ಜತೆಗೆ ತಮ್ಮ ಇಷ್ಟಾರ್ಥ ಸಿದ್ಧಿ ಪ್ರಾಪ್ತಿಯಾಗಲೆಂದು ಭಕ್ತರು ನಿವೇದಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಜನರ ನಂಬಿಕೆಯನ್ನು ದೇಗುಲ ಉಳಿಸಿಕೊಂಡಿದೆ. ಈ ದಿಸೆಯಲ್ಲಿ ಚನ್ನಿಗರಾಯಸ್ವಾಮಿ ಈ ಭಾಗದಲ್ಲಿ ಭಕ್ತರ ಪಾಲಿನ ಆರಾಧ್ಯ ದೈವವೆನಿಸಿದ್ದಾನೆ. ಅದೇ ರೀತಿಯಲ್ಲಿ ಭಕ್ತರು ಆರಾಧಿಸುತ್ತಿದ್ದಾರೆ.
ಒಟ್ಟಾರೆ ಚೋಳರ ಕಾಲದಲ್ಲಿ ನಿರ್ಮಿತವಾದ ಈ ದೇಗುಲದಲ್ಲಿ ಶ್ರೀ ಚನ್ನಿಗರಾಯ ಸ್ವಾಮಿಯನ್ನು ಈ ಭಾಗದ ಭಕ್ತರು ಆರಾಧಿಸುವುದರ ಜತೆಗೆ ದೇಗುಲದ ರಕ್ಷಣೆಯನ್ನು ಮಾಡುತ್ತಿದ್ದಾರೆ. ಇದರಿಂದ ಈ ದೇಗುಲ ಮುಂದಿನ ಪೀಳಿಗೆಗೆ ಐತಿಹಾಸಿಕ ನೆಲೆಗಟ್ಟನ್ನು ಒದಗಿಸುತ್ತದೆ ಎಂದು ಹೇಳಬಹುದು.
ಈ ದೇಗುಲವು ಚೋಳರ ಕಾಲದಲ್ಲಿ ನಿರ್ಮಿತವಾಗಿದ್ದು, ನಮ್ಮ ವಂಶಸ್ಥರಿಂದ ಪೂಜಾ ಕಾರ್ಯ ನೆರವೇರಿಸಲಾಗುತ್ತಿದೆ. ತಂದೆ ಕಾಲವಾದ ನಂತರ ನಾನು ಕಳೆದ 3 ವರ್ಷದಿಂದ ಪೂಜಾ ಕಾರ್ಯವನ್ನು ಮುಂದುವರಿಸಿದ್ದೇನೆ. ಪ್ರತಿ ಶನಿವಾರ ಸ್ವಾಮಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಳು ನೆರವೇರುತ್ತದೆ ಎಂಬ ಭಾವನೆ ಭಕ್ತರಲ್ಲಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.ಲೋಕೇಶ್, ದೇಗುಲದ ಅರ್ಚಕ.