ಸಿಮ್ಸ್‌ನಲ್ಲಿ ಸ್ಕಾೃನಿಂಗ್, ಎಕೋ ಪರೀಕ್ಷೆ ಅಲಭ್ಯ

30chn6
Published on

ಚಾಮರಾಜನಗರ : ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯಲ್ಲಿ ಸ್ಕಾೃನಿಂಗ್ ಹಾಗೂ ಎಕೋ ಪರೀಕ್ಷೆ ಸೌಲಭ್ಯವಿಲ್ಲದೆ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಉಚಿತ ಅಥವಾ ಕಡಿಮೆ ದರದಲ್ಲಿ ಮಾಡಿಸಬಹುದಾದ ಸ್ಕಾೃನಿಂಗ್ ಹಾಗೂ ಎಕೋ ಪರೀಕ್ಷೆ ತಿಂಗಳಿಂದ ದೊರೆಯದೆ ಬಡ ರೋಗಿಗಳು ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ಹಣ ಕೊಟ್ಟು ಪರೀಕ್ಷೆ ಮಾಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಸಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್‌ರೇ, ಸಿಟಿಸ್ಕಾೃನ್ ಸೇವೆ ನಿರಂತರವಾಗಿ ನೀಡಲಾಗುತ್ತಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಆಲ್ಟ್ರಾಸೌಂಡ್ ಸ್ಕಾೃನಿಂಗ್ ಮತ್ತು ಎಕೋ ಪರೀಕ್ಷೆ ಸೌಲಭ್ಯಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಸಿಮ್ಸ್ ಆಸ್ಪತ್ರೆ ಮತ್ತು ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು ಒಳಗೊಂಡಂತೆ ಒಬ್ಬರೇ ರೇಡಿಯಾಲಜಿಸ್ಟ್ ಇರುವುದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾರಣಕ್ಕೆ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಆಲ್ಟ್ರಾಸೌಂಡ್ ಸ್ಕಾೃನಿಂಗ್ ಕೊಠಡಿ ಮುಚ್ಚಿದ್ದು, ರೋಗಿಗಳು ಸ್ಕಾೃನಿಂಗ್ ಮಾಡಿಸಲು ಜಿಲ್ಲಾಸ್ಪತ್ರೆಗೆ ಬರಬೇಕಾಗುತ್ತದೆ. ಇಲ್ಲವೇ ಖಾಸಗಿ ಲ್ಯಾಬ್‌ಗಳ ಮೊರೆಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಎಕೋಕಾರ್ಡಿಯೋಗ್ರಫಿಗೆ ಈವರೆಗೂ ಯಾವುದೇ ವೈದ್ಯರು ಇಲ್ಲದ ಪರಿಸ್ಥಿತಿ ಇದೆ. ಸಿಮ್ಸ್ ಆಡಳಿತ ಮಂಡಳಿಯ ಮನವಿಯ ಮೇರೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗಳಿಂದ ವೈದ್ಯರು ಬಂದು ಸೋಮವಾರ ಮತ್ತು ಬುಧವಾರ ಎಕೋ ಪರೀಕ್ಷೆ ಮಾಡುತ್ತಿದ್ದರು. ಆದರೆ ಈ ಸೌಲಭ್ಯವೂ ತಿಂಗಳಿಂದ ದೊರೆಯದೆ ಖಾಸಗಿಯಲ್ಲಿ ಎಕೋ ಪರೀಕ್ಷೆ ಮಾಡಸಬೇಕಾಗಿದೆ. ಇದರಿಂದಾಗಿ ರೋಗಿಗಳು ಮತ್ತು ಬಡ ಜನರು ತುಂಬ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಿಮ್ಸ್ ಆಸ್ಪತ್ರೆಗೆ ಹೊಸದಾಗಿ ಒಬ್ಬರು ರೇಡಿಯಾಲಜಿಸ್ಟ್ ಹಾಗೂ ಎಕೋಕಾರ್ಡಿಯಾಲಜಿಸ್ಟ್ ನೇಮಕ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಪರದಾಟ
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ದೊರೆಯಲಿದೆ ಎಂಬ ಕಾರಣಕ್ಕೆ ರೋಗಿಗಳು, ಅದರಲ್ಲೂ ಬಡ ರೋಗಿಗಳು ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲಿ ಆಲ್ಟ್ರಾ ಸೌಂಡ್‌ಸ್ಕಾೃನಿಂಗ್ ಮತ್ತು ಎಕೋ ಪರೀಕ್ಷೆ ಸೌಲಭ್ಯ ದೊರೆಯದೆ ನಿತ್ಯವೂ ಖಾಸಗಿ ಲ್ಯಾಬ್‌ಗಳಿಗೆ ರೋಗಿಗಳು ಅಲೆದಾಡುವಂತಾಗಿದೆ. ಸಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಹೋಗುವವರು ವೈದರನ್ನು ಸಂಪರ್ಕಿಸಿದ ನಂತರ ಅವರು ಆಲ್ಟ್ರಾ ಸೌಂಡ್ ಸ್ಕಾೃನಿಂಗ್ ಮಾಡಿಸಲು ಹೇಳಿದರೆ ಪುನಃ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಹಲವರು ಖಾಸಗಿಯತ್ತ ಮುಖ ಮಾಡುತ್ತಿದ್ದು, ಅಲ್ಲಿ ದುಬಾರಿ ಹಣ ಕಟ್ಟುವಂತಹ ಪರಿಸ್ಥಿತಿ ಇದೆ. ಇದರಿಂದ ಬಡವರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಸಿಮ್ಸ್ ಆಸ್ಪತ್ರೆಯಲ್ಲಿ ಶಸಚಿಕಿತ್ಸೆಗೆ ಒಳಗಾದವರಿಗೆ ಹಾಗೂ ಐಸಿಯುನಲ್ಲಿ ಇರುವಂಥವರಿಗೆ ಎಕೋ ಪರೀಕ್ಷೆ ಅಗತ್ಯವಾಗಿ ಮಾಡಿಸಬೇಕಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಡರೋಗಿಗಳು ನಿತ್ಯವೂ ಯಾತನೆ ಪಡುವಂತಾಗಿದೆ.

ರೇಡಿಯಾಲಜಿಸ್ಟ್ ಕೊರತೆ
ಚಾ.ನಗರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಒಬ್ಬರೇ ರೇಡಿಯಾಲಜಿಸ್ಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಈ ಸಮಸ್ಯೆ ತಲೆದೋರಿದೆ. ಇದು ನಿನ್ನೆ-ಮೊನ್ನೆಯ ಸಮಸ್ಯೆಯಲ್ಲ, ಹಲವು ವರ್ಷಗಳಿಂದಲೂ ಮುಂದುವರಿಯುತ್ತಲೇ ಇದೆ. ಆದರೆ ಈವರೆಗೂ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿಲ್ಲ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಆಲ್ಟ್ರಾ ಸೌಂಡ್ ಸ್ಕಾೃನಿಂಗ್ ಮಾಡುವ ಅಗತ್ಯ ಇರುವುದರಿಂದ ಇರುವ ಒಬ್ಬರು ರೇಡಿಯಾಲಜಿಸ್ಟ್ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇದರಿಂದ ಸಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಸಿಮ್ಸ್ ಆಸ್ಪತ್ರೆಯಲ್ಲಿರುವ ರೇಡಿಯಾಲಜಿಸ್ಟ್ ಕೊರತೆಯನ್ನು ನೀಗಿಸಿ ಹೊಸದಾಗಿ ಮತ್ತೊಬ್ಬರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಎಕೋ ಸೌಲಭ್ಯವನ್ನು ಒದಗಿಸಿ ಬಡರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುಮಾರು ಒಂದು ತಿಂಗಳಿಂದ ಸಿಮ್ಸ್ ಆಸ್ಪತ್ರೆಯಲ್ಲಿ ಆಲ್ಟ್ರಾ ಸೌಂಡ್ ಸ್ಕಾೃನಿಂಗ್ ಮತ್ತು ಎಕೋ ಪರೀಕ್ಷೆ ಇಲ್ಲದೆ ಬಡ ರೋಗಿಗಳು ಪರದಾಡುವಂತಾಗಿದೆ. ಇದರಿಂದ ಸ್ಕಾೃನಿಂಗ್ ಮಾಡಿಸಲು ಸಿಮ್ಸ್ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಬರುವಂತಹ ಪರಿಸ್ಥಿತಿ ಇದೆ. ಇದು ಜನರನ್ನು ಖಾಸಗಿ ಲ್ಯಾಬ್‌ಗಳಿಗೆ ಹೋಗುವಂತೆ ಮಾಡುತ್ತಿದೆ.ಅಕ್ಷಯ್ ಕುಮಾರ್ರಾಮಸಮುದ್ರ, ಚಾಮರಾಜನಗರ ಎಕೋ ನಮ್ಮಲ್ಲಿ ಮೊದಲಿನಿಂದಲೂ ಇಲ್ಲ, ಕಾರ್ಡಿಯಾಲಜಿಸ್ಟ್ ಇಲ್ಲದ ಕಾರಣಕ್ಕೆ ಖಾಸಗಿ ಆಸ್ಪತ್ರೆಯಿಂದ ಒಂದು ತಂಡ ಬರುತ್ತಿತ್ತು. ಆಲ್ಟ್ರಾ ಸೌಂಡ್ ಸ್ಕಾೃನಿಂಗ್ ಒಬ್ಬರೇ ರೇಡಿಯಾಲಜಿಸ್ಟ್ ಇರುವುದರಿಂದ ಎರಡು ಕಡೆಯೂ ಸೇವೆ ನೀಡಲು ಕಷ್ಟವಾಗುತ್ತಿದೆ. ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಒದಗಿಸುತ್ತಿದ್ದಾರೆ.ಡಾ.ಕೃಷ್ಣಪ್ರಸಾದ್ಜಿಲ್ಲಾ ಶಸಚಿಕಿತ್ಸಕ, ಸಿಮ್ಸ್ ಆಸ್ಪತ್ರೆ ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net