ದಲಿತರ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ವಿಲ

29chn3
Published on

ಚಾಮರಾಜನಗರ: ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅಪಮಾನ ಮಾಡುವುದಲ್ಲದೆ, ದಲಿತರ ಅಭಿವೃದ್ಧಿಯಲ್ಲಿ ವಿಲವಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆರೋಪಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಬಲವರ್ಧನೆಗಾಗಿ ಭೀಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಗೆ ಹೋಗದಂತೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಒಬಿಸಿ ಮೀಸಲಾತಿ, ಜಮ್ಮು-ಕಾಶ್ಮೀರ ಪ್ರತ್ಯೇಕತೆ, ಹಿಂದು ಕೋಡ್‌ಬಿಲ್ ಜಾರಿಗೆ ಹಿಂದೇಟು ಹಾಕುವ ಮೂಲಕ ಮಂತ್ರಿ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡಲು ಕಾಂಗ್ರೆಸ್ ಕಾರಣವಾಯಿತು. ಸುಮಾರು 70 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಅಂಬೇಡ್ಕರ್ ಹಾಗೂ ದಲಿತರಿಗೆ ಮಾಡಿದ ದ್ರೋಹವನ್ನು ತಿಳಿಸುವ ಮತ್ತು ಇತಿಹಾಸದಲ್ಲಿ ನಡೆದಿರುವ ಸತ್ಯ ಘಟನೆಗಳನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ರಾಜ್ಯಾದ್ಯಂತ ಭೀಮ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂಸತ್ತಿಗೆ ಪ್ರವೇಶಿಸದಂತೆ ಎರಡು ಬಾರಿ ಕಾಂಗ್ರೆಸ್ ಷಡ್ಯಂತ್ರ ರೂಪಿಸಿತು. ಅಂಬೇಡ್ಕರ್ ಸೋಲಿಸಿದವರಿಗೆ 1960ರಲ್ಲಿ ಕಾಂಗ್ರೆಸ್ ಪದ್ಮಭೂಷಣ ನೀಡಿದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲು ಹಿಂದೇಟು ಹಾಕಿತು. ಕೊನೆಗೆ ಕಾಂಗ್ರೆಸ್ಸೇತರ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿತು. ಪ್ರಧಾನಿ ನರೇಂದ್ರ ಮೋದಿಯವರು ಡಾ.ಅಂಬೇಡ್ಕರ್ ಅವರ ಪಂಚ ಸ್ಥಳಗಳ ಅಭಿವೃದ್ಧಿ, ನ.26 ರಂದು ಸಂವಿಧಾನ ದಿನಾಚರಣೆ ಮೂಲಕ ಅಂಬೇಡ್ಕರ್ ಆಶಯಗಳನ್ನು ಜೀವಂತಗೊಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಮಾಜಿ ಶಾಸಕ ಎಸ್.ಬಾಲರಾಜ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ವೆಂಕಟರಮಣಸ್ವಾಮಿ(ಪಾಪು), ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಕಾರ್ಯದರ್ಶಿ ಪರಮಾನಂದ, ಡಾ.ರಾಜು, ಮುಖಂಡ ದತ್ತೇಶ್ ಕುಮಾರ್, ಹನೂರು ವೆಂಕಟೇಶ್, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಉಪಾಧ್ಯಕ್ಷ ಪರಮೇಶ್ವರ್, ಡಾ.ಶಿವರಾಂ, ವೆಂಕಟೇಶ್, ಎ.ಆರ್.ಬಾಲರಾಜ್ ಹಾಜರಿದ್ದರು.

ಶೋಷಿತರಿಗೆ ಅಪಮಾನ:
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಶೋಷಿತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ ಸಮುದಾಯದ ರಾಷ್ಟ್ರಪತಿಗೆ ಏಕವಚನದಲ್ಲಿ ಸಂಬೋಧಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದ ಘನತೆಯನ್ನು ಬಿಂಬಿಸುವ ರಾಷ್ಟ್ರಪತಿಯನ್ನು ಏಕವಚನದಲ್ಲಿ ಸಂಬೋಧಿಸುವ ಮೂಲಕ ಶೋಷಿತ ಸಮುದಾಯದ ಹೆಣ್ಣು ಮಗಳಿಗೆ ಅಪಮಾನ ಮಾಡಿದಂತಾಗಿದೆ. ಇದನ್ನು ನಾನು ಹಳ್ಳಿಯವನು ಸಹಜವಾಗಿ ಮಾತನಾಡುತ್ತೇನೆಂದು ಸಮರ್ಥಿಸಿಕೊಂಡಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಲ್ಲಿಯೂ ಹೀಗೆಯೇ ಸಹಜವಾಗಿ ಮಾತನಾಡುತ್ತಾರೆಯೇ? ಈ ನೆಲದ ದಲಿತರು, ಬಡವರ ಬಗ್ಗೆ ಸಿಎಂ ಸಿದ್ದರಾಮಯ್ಯ ಧಿಮಾಕು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು.

ಈ ದೇಶದ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ದಲಿತರ ಅಭಿವೃದ್ಧಿ ಹಾಗೂ ಡಾ.ಅಂಬೇಡ್ಕರ್ ಚಿಂತನೆಗಳನ್ನು ಮಣ್ಣುಪಾಲು ಮಾಡುವ ಕೆಲಸ ಮಾಡಿದೆ. ಇತಿಹಾಸದಲ್ಲಿ ನಡೆದಿರುವ ಸತ್ಯ ಘಟನೆಗಳನ್ನು ಶೋಷಿತ ಜನರಿಗೆ ತಿಳಿಸುವ ಅಗತ್ಯವಿದೆ.ಸಿಮೆಂಟ್ ಮಂಜು, ರಾಜ್ಯಾಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸುವಂತೆ ವೆಂಕಟರಮಣಸ್ವಾಮಿ ಅವರನ್ನು ಒಳಗೊಂಡಂತೆ ಸಾವಿರಾರು ದಲಿತ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಬರಬೇಕಾಯಿತು.ಎಸ್.ಬಾಲರಾಜ್, ಮಾಜಿ ಶಾಸಕ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net