

ಯಳಂದೂರು: ಮಕ್ಕಳು ಮೊಬೈಲ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳ ದಾಸರಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ಮಕ್ಕಳನ್ನು ಪುಸ್ತಕ ಓದುವಂತೆ ಪ್ರೇರೇಪಿಸಬೇಕು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಕರೆ ನೀಡಿದರು.
ಪಟ್ಟಣದ ದೇವಾಂಗ ಬೀದಿಯಲ್ಲಿರುವ ಲಯನ್ಸ್ ವಿದ್ಯಾಸಂಸ್ಥೆಯ 33ನೇ ಶಾಲಾ ವಾರ್ಷಿಕೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಈಗ ಕಲಿಕೆಯ ವಿಧಾನಗಳು ಬದಲಾಗಿದೆ. ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳು ಮಕ್ಕಳ ಕಲಿಕೆಗೆ ಪೂರಕವಾಗಿರಬೇಕೇ ಹೊರತು ದಿಕ್ಕು ತಪ್ಪುವಂತಾಗಬಾರದು ಎಂದರು.
ಗ್ರಾಮೀಣ ಭಾಗದಲ್ಲಿ ಲಯನ್ಸ್ ಸಂಸ್ಥೆಯು ಪ್ರತಿಷ್ಠಿತ ಶಾಲೆಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದಾಯಕ ಸಂಗತಿಯಾಗಿದೆ. ಈ ಸಂಸ್ಥೆಯಲ್ಲಿ ಓದಿ ಸಾಧನೆ ಮಾಡಿದವರು ಈಗಿರುವ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಇದನ್ನು ಪರಿಚಯಿಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗ ಮಾಡಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ಓರೆಗೆ ಹಚ್ಚುವ ಕೆಲಸವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.
ಶಾಲೆಯಲ್ಲಿ ಉತ್ತಮ ಸಾಧನೆಗೈದ ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಲಯನ್ಸ್ ಕಾನ್ವೆಂಟ್‌ನ ಅಧ್ಯಕ್ಷ ಡಾ.ಎಸ್.ಕೃಷ್ಣಯ್ಯ, ಸಂಸ್ಥೆಯ ಪದಾಧಿಕಾರಿಗಳಾದ ಡಿ.ಜೆ.ರಾಜೇಶ್, ಎಚ್.ಜಿ. ಸಂತೋಷ್, ಬಸವರಾಜಪ್ಪ, ಮಹಾದೇವಸ್ವಾಮಿ, ಎಂ.ವೀರಭದ್ರಸ್ವಾಮಿ, ಉಮೇಶ್, ಮುಖ್ಯ ಶಿಕ್ಷಕ ಶಿವಕುಮಾರ್ ಹಾಜರಿದ್ದರು.