

ಚಾಮರಾಜನಗರ : ದೇಶದ ಸಂವಿಧಾನದಿಂದ ಸರ್ವರಿಗೂ ಸಾಮಾಜಿಕ ನ್ಯಾಯ, ರಕ್ಷಣೆ, ಬದುಕು ದೊರಕಿದಂತಾಗಿದೆ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.
ನಗರದ ರೋಟರಿ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಹಾಗೂ ವೆಂಕಟರಮಣಸ್ವಾಮಿ (ಪಾಪು) ಗೆಳೆಯರ ಬಳಗದ ವತಿಯಿಂದ ಸಂವಿಧಾನ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಮನೆಮನೆಗೆ ಸಂವಿಧಾನ ಹಾಗೂ ಮಲ್ಕುಂಡಿ ಮಹದೇವಸ್ವಾಮಿ ರಚನೆಯ ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಸಂವಿಧಾನ ಜಾರಿಯಾಗಿ 75 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸಂವಿಧಾನದಡಿಯಲ್ಲಿ ಜನರಿಗೆ ಹಕ್ಕು, ಸೌಲಭ್ಯಗಳು ಸಿಕ್ಕಿವೆಯೇ ಹೊರತು ಸಂಸದರು, ಶಾಸಕರಿಂದ ಅಲ್ಲ. ದಲಿತ ಸಾಹಿತಿಗಳು ಕೂಡ ನಮ್ಮ ನಾಯಕರ ನೈಜತೆ ಬರೆಯುವ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ಸಾಹಿತಿ ಮುಳ್ಳೂರು ಶಿವಮಲ್ಲು ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನ ಪೀಠಿಕೆಯನ್ನು ಓದಿ ಅಲ್ಲಿರುವ ಚಿಂತನೆಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು. ಆಗ ಮಾತ್ರ ಅದರ ಆಶಯಗಳು ಬೇಗ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತದೆ. ಮಲ್ಕುಂಡಿ ಮಹದೇವಸ್ವಾಮಿ ಬರೆದಿರುವ ಅಂಬೇಡ್ಕರ್ ಅರಿವು ಪುಸ್ತಕ ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ತುಂಬುವ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗುರುರಾಜ್ ಯರಗನಹಳ್ಳಿ, ಮೂಕಳ್ಳಿ ಬಸವಣ್ಣ, ಲೇಖಕ ಮಲ್ಕುಂಡಿ ಮಹದೇವಸ್ವಾಮಿ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಚಂದ್ರಕಾಂತ್ ನೇರಳೆ, ಎಂ.ಶಾಂತರಾಜು, ಕಾಳಿಚರಣ್, ಡಾ.ಶಿವರಾಜ್, ವಾಸು ಹೊಂಡರಬಾಳು, ಮೋಹನ್ (ನಗು) ಮತ್ತಿತರರಿದ್ದರು.