

ಯಳಂದೂರು: ಹೊಂಗನೂರು ಹಿರೀಕರೆ ಅಭಿವೃದ್ಧಿಗೆ ಕ್ರಮ ವಹಿಸಿ ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಎನ್.ಬೋಸರಾಜು ತಿಳಿಸಿದರು.
ಶುಕ್ರವಾರ ಸಂಜೆ ಸಮೀಪದ ಹೊಂಗನೂರು ಹಿರೀಕೆರೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರೊಂದಿಗೆ ಭೇಟಿ ನೀಡಿ ಕೆರೆಯನ್ನು ವೀಕ್ಷಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಮಾತನಾಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಹಿರೀಕೆರೆ ಅಭಿವೃದ್ಧಿಯ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದ ವೇಳೆ ನಾನೇ ಸ್ಥಳಕ್ಕೆ ಭೇಟಿ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ ಎಂದರು.
350 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವ ಈ ಕೆರೆಯಿಂದ 3 ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ಒಟ್ಟು 1800 ಕ್ಕೂ ಹೆಚ್ಚು ಎಕರೆ ಭೂಮಿಗೆ ಇದು ನೀರುಣಿಸುತ್ತದೆ. ಇದರ ವ್ಯಾಪ್ತಿಗೆ ಒಳಪಡುವ ಮುಖ್ಯ ಕಾಲುವೆ 6 ಕಿ.ಮಿ ಇದ್ದು ಇದರ ಉಪ ಕಾಲುವೆಗಳು 30 ಕಿ.ಮಿ ಇದೆ. ಆದರೆ ಕಳೆದ 40 ವರ್ಷಗಳ ಹಿಂದೆ ಈ ಕಾಲುವೆ ನಿರ್ಮಾಣವಾಗಿದ್ದು. ಇಲ್ಲಿ ನೀರು ಹರಿಯುವುದಿಲ್ಲ. ಹೂಳು ತುಂಬಿದೆ. ಕೆಲವೆಡೆ ಕಾಲುವೆ ಕಿತ್ತು ಬಂದಿದೆ. ಇದನ್ನು ದುರಸ್ತಿಗೊಳಿಸಬೇಕು. ಈ ಕೆರೆ ಮಳೆಯಾದರೆ ಮಾತ್ರ ತುಂಬುತ್ತದೆ. ಇದಕ್ಕೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆಯನ್ನು ರೂಪಿಸಬೇಕು, ಈ ಕೆರೆ ತುಂಬಿದರೆ ನೀರು ಹೆಚ್ಚುವುದರಿಂದ ಬಿಆರ್‌ಟಿ ಕಾಡಂಚಿನ ಜಮೀನಿಗೆ ತೆರಳಲು ತೊಂದರೆಯಾಗುತ್ತದೆ ಹಾಗಾಗಿ ಇಲ್ಲಿಗೆ ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಸಚಿವರು, ಈ ಕೆರೆಗೆ ಎ.ಆರ್.ಕೃಷ್ಣಮೂರ್ತಿ ಅವರ ತಂದೆ ಬಿ.ರಾಚಯ್ಯ ಅವರು ಅಪಾರ ಕೊಡುಗೆ ನೀಡಿ ಈ ಕೆರೆಯ ಅಭಿವೃದ್ಧಿಗೂ ಕಾರಣರಾಗಿದ್ದಾರೆ. ಹಾಗಾಗಿಯೇ ನಾನು ವೈಯುಕ್ತಿಕ ಆಸಕ್ತಿ ವಹಿಸಿ ಇಲ್ಲಿಗೆ ಬಂದಿದ್ದೇನೆ. ಕೆರೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಇದಕ್ಕೆ ಉತ್ತಮ ಯೋಜನೆಯನ್ನು ರೂಪಿಸಿ, ಮುಖ್ಯಮಂತ್ರಿ ಗಮನಕ್ಕೆ ತಂದು ಮುಂದಿನ ಬಜೆಟ್‌ನಲ್ಲಿ ಇದನ್ನು ಸೇರಿಸಿ ಕಾಯಕಲ್ಪ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷರಾದ ವಿಶಾಲಾಕ್ಷಿ, ರೇವಣ್ಣ, ಉಪಾಧ್ಯಕ್ಷ ನವೀನ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಕಂದಹಳ್ಳಿ ನಂಜುಂಡಸ್ವಾಮಿ, ಸುಗಂಧರಾಜನ್, ಹೊಂಗನೂರು ಪುಟ್ಟಸ್ವಾಮಿ, ಎಸ್‌ಇ ವಿನಾಯಕ್, ಎಇಇ ನಿರಂಜನ್, ಜೆಇ ಅಭಿಲಾಶ್ ಶಾಸಕರ ಆಪ್ತ ಕಾರ್ಯದರ್ಶಿ ಚೇತನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.