

ಚಾಮರಾಜನಗರ: ಎಲ್ಲರನ್ನೂ ಕೇಳಿ ನಿಗಮ, ಮಂಡಳಿ ಮಾಡಲಾಗಲ್ಲ. ಅವರ ಅಭಿಪ್ರಾಯ ಇದ್ದರೆ ಹೇಳಬೇಕು, ಅದು ಆಗತ್ತೋ, ಬಿಡತ್ತೋ ಮುಂದಿನ ವಿಚಾರ ಎಂದು ರೇಷ್ಮೆ, ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹರಿಹಾಯ್ದರು.
ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಸಚಿವರಾದ ಡಾ.ಜಿ.ಪರಮೇಶ್ವರ್, ರಾಜಣ್ಣ ಹೇಳಿಕೆಗೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕೋಳಿ ಕೊಯ್ಯಬೇಕಾದರೆ ಕೇಳಕ್ಕಾಗತ್ತ ಎಂದು ಪ್ರಶ್ನಿಸಿದರು. ಜಗದೀಶ ಶೆಟ್ಟರ್ ಅವರು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಸಾರ್ವಜನಿಕ ಜೀವನದಲ್ಲಿ ಅವರದೇ ಆದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಒಂದಿನ ಈ ಪಾರ್ಟಿ ಒಂದಿನ ಆ ಪಾರ್ಟಿ ಎಂದರೆ ಏನು ಹೇಳಬೇಕು ಅವರಿಗೆ? ಅವರಿಗೆ ಗೌರವ ಕೊಡಲು ಎಂಎಲ್ಸಿಯನ್ನು ಮಾಡಿದ್ದವು. ಅವರು ಆಪರೇಷನ್ ಮಾಡೋದು ಮಾಡುತ್ತಿರುತ್ತಾರೆ. ಆದರೆ ನಮ್ಮ ಪಕ್ಷದವರು ಯಾರೂ ಅಲ್ಲಿಗೆ ಹೋಗಲ್ಲ, 5 ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಇದ್ದರು.