ಲಪುಷ್ಪ ಪ್ರದರ್ಶನದಲ್ಲಿ ಕಾಂತಾರ, ಮಾದೇಶ್ವರ

26chn4
Published on

ಚಾಮರಾಜನಗರ : ಮರಳಿನಲ್ಲಿ ಅರಳಿದ ಕಾಂತಾರ, ಸಿರಿಧಾನ್ಯದ ಹುಲಿಯನೇರಿ ಕುಳಿತ ಏಳು ಮಲೆಯ ಒಡೆಯ ಮಾದೇಶ್ವರ, ಹೂ ರಾಶಿಯಲ್ಲಿ ಹಿಂಡಾನೆ, ವಿವಿಧ ಬಗೆಯ ಹಣ್ಣಿನ ಕಲಾಕೃತಿಗಳು ಲಪುಷ್ಪ ಪ್ರದರ್ಶನಕ್ಕೆ ಮೆರುಗು ತುಂಬಿದವು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ಲಪುಷ್ಪ ಪ್ರದರ್ಶನದಲ್ಲಿ ಮೂಡಿರುವ ವಿವಿಧ ಹೂವಿನ ಕಲಾಕೃತಿ, ದೀಪದೊಳಗೆ ಕರ್ನಾಟಕ ಭೂಪಟ, ಫೋಟೋ ಶೂಟ್ ಮತ್ತು ಸೆಲ್ಫಿ ಪಾಯಿಂಟ್‌ಗಳು, ವಿವಿಧ ಬಗೆಯ ತರಕಾರಿ ಕೆತ್ತನೆಗಳು, ಸಿರಿಧಾನ್ಯ ಕಣ ಹಾಗೂ ಅಲಂಕಾರಿಕ ಹೂವಿನ ಗಿಡಗಳು ಲಪುಷ್ಟ ಪ್ರದರ್ಶನದ ಸೊಬಗನ್ನು ಹೆಚ್ಚಿಸಿವೆ.

ರೈತರು ಮತ್ತು ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ವೈಜ್ಞಾನಿಕ ಮಾಹಿತಿ ಕುರಿತು ಅರಿವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸಲು ಆಯೋಜಿಸಿರುವ ಲಪುಷ್ಪ ಪ್ರದರ್ಶನದಲ್ಲಿ ಸರ್ಕಾರದ ವಿವಿಧ ಯೋಜನೆ ಮತ್ತು ತಾಂತ್ರಿಕತೆಯ ಕುರಿತು ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಲಾಗಿದೆ. ಕೃಷಿ ಇಲಾಖೆ, ಪಶುಪಾಲನೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ, ಕೆವಿಕೆ ಹರದನಹಳ್ಳಿ ಹಾಗೂ ಇನ್ನಿತರೆ ಇಲಾಖೆಗಳು ಮಳಿಗೆ ತೆರೆದು ಮಾಹಿತಿ ನೀಡುತ್ತಿವೆ.

ಹನಿನೀರಾವರಿ ಪದ್ಧತಿ, ಕೃಷಿಹೊಂಡ-ನೀರು ಸಂರಕ್ಷಣೆ, ಗ್ರೀನ್‌ಹೌಸ್, ಹಣ್ಣು ಮಾಗಿಸುವ ಘಟಕ, ಈರುಳ್ಳಿ ಶೇಖರಣಾ ಘಟಕ, ಕೈತೋಟ, ಜೇನುಕೃಷಿ, ತಾರಸಿ ತೋಟ, ನೆರಳು ಪರದೆ, ಮೀನುಗಾರಿಕೆ ಹಾಗೂ ಜಲಾನಯನ ಅಭಿವೃದ್ಧಿ ಪ್ರದೇಶದ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿದೆ. ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ರೈತರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ವಿವಿಧ ಬೇಸಾಯ ಪದ್ಧತಿ ಪರಿಕರಗಳನ್ನು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಪುಷ್ಪ ಪ್ರದರ್ಶನಕ್ಕೆ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ರೈತರ ಜತೆಗೆ ಸಾಮಾನ್ಯರಿಗೂ ಮಾಹಿತಿ:
ಜಿಲ್ಲಾಡಳಿತ ಇಂತಹ ಲಪುಷ್ಟ ಪ್ರದರ್ಶನ ಆಯೋಜಿಸಿರುವುದರಿಂದ ರೈತರು ಹಾಗೂ ಜನಸಾಮಾನ್ಯರಿಗೂ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ನಗರದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಿರುವ ಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುಮಾರು 3 ವರ್ಷಗಳಿಂದ ಈ ತರಹದ ಯಾವುದೇ ಕಾರ್ಯಕ್ರಮವನ್ನು ಆಯೋಜನೆ ಮಾಡಿರಲಿಲ್ಲ. ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಪರಿಚಯವಾಗುತ್ತಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಅದರ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಸಾರ್ವಜನಿಕರು ಹಾಗೂ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್‌ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮೀ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net