ರೈತರ ಸಮಸ್ಯೆ ಆಲಿಸಿದ ಸಚಿವ ಕೆ.ವೆಂಕಟೇಶ್

26chn1
Published on

ಚಾಮರಾಜನಗರ: ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಮಲೆ ಮಹದೇಶ್ವರ ಬೆಟ್ಟದಿಂದ ಚಾಮರಾಜನಗರದವರೆಗೆ ಪಾದಯಾತ್ರೆ ನಡೆಸಿದ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿದರು. ಸ್ಥಳಕ್ಕೆ ಸಚಿವ ಕೆ.ವೆಂಕಟೇಶ್ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ಹೊನ್ನೂರು ಪ್ರಕಾಶ್ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ರಸ್ತೆಗಳು ನಿರ್ಮಾಣವಾಗಿಲ್ಲ. ಜಮೀನಿಗಳಲ್ಲಿ ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶ ಪಡಿಸುತ್ತಿವೆ. ಚಿರತೆಗಳು ದನ, ಕರು, ಹಸುಗಳ ಮೇಲೆ ದಾಳಿ ಮಾಡುತ್ತಿವೆ. ಸಾವಯವ ಕೃಷಿಗೆ ಸಬ್ಸಿಡಿ ನೀಡಬೇಕು. ಹನೂರು, ಚಾಮರಾಜನಗರ ಭಾಗದ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿಲ್ಲ. ಚಂಗಡಿ ಗ್ರಾಮವನ್ನು ಕಾಡಿನಿಂದ ಹೊರಗೆ ಸ್ಥಳಾಂತರ ಮಾಡಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ ಸೌಲಭ್ಯವಿಲ್ಲ. ಇದ್ದರೂ ಹಲವು ಹಳ್ಳಿಗಳಲ್ಲಿ ನಿಲ್ಲಿಸುತ್ತಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದರು.

ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ಕಾಡಂಚಿನ ಗ್ರಾಮಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಕ್ರಮವಹಿಸಲಾಗಿದೆ. ಸಾವಯವ ಕೃಷಿಗೆ ಸರ್ಕಾರದಿಂದ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಚಂಗಡಿ ಗ್ರಾಮ ಸ್ಥಳಾಂತರ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾಹಿತಿ ನೀಡಲಿದ್ದಾರೆ. ಜಿಲ್ಲೆಗೆ 100 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯ ನೀಡಬೇಕೆಂದು ಕೋರಲಾಗಿತ್ತು. ಆದರೆ 70 ಬಸ್‌ಗಳು ಸರ್ಕಾರದಿಂದ ಸಿಗುತ್ತಿದ್ದು, ಸೇವೆ ಆರಂಭವಾದ ಬಳಿಕ ಸಾರಿಗೆ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿರು.

ರಸ್ತೆ ಅಭಿವೃದ್ಧಿಗೆ ಸರ್ಕಾರದ ಅನುಮತಿ ಸಿಕ್ಕಿದೆ
ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟದ ರಸ್ತೆಗಳನ್ನು ಪಿಡಬ್ಲುೃಡಿ ಇಲಾಖೆ ಮೂಲಕ ನಿರ್ಮಾಣ ಮಾಡಿಸಲು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಕಾಡಿನೊಳಗಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್‌ನಿಂದ 40 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಎಷ್ಟು ದಿನಗಳಲ್ಲಿ ಕೆಲಸ ಮುಗಿಸುತ್ತೀರ ತಿಳಿಸಿ. ಇಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪಾದಯಾತ್ರೆ ಮಾಡಿದ್ದೇವೆ ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಅರಣ್ಯಾಧಿಕಾರಿ ದೀಪಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ, ರೈತ ಮುಖಂಡರಾದ ಬಂದೀಗೌಡನಹಳ್ಳಿ ನಟರಾಜು, ಕೊಳ್ಳೇಗಾಲ ಶಶಿಕುಮಾರ್, ಚಂಗಡಿ ಕರಿಯಪ್ಪ, ಪ್ರಶಾಂತ್ ಜಯರಾಂ, ಗುಂಡ್ಲುಪೇಟೆ ಶಾಂತಕುಮಾರ್ ಮತ್ತು ನೂರಕ್ಕೂ ಹೆಚ್ಚು ರೈತರ ಭಾಗವಹಿಸಿದ್ದರು.

ರೈತರ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು. ಪ್ರಗತಿ ಕೆಲಸಗಳು ನಡೆಯುವವರೆಗೂ ರೈತರು ಕಾಯಬೇಕು. ನಾವು ನಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net