ಕಳಚಿತು ಗಾಂಧಿವಾದದ ಕೊಂಡಿ

Published on

ಚಾಮರಾಜನಗರ : ದೇಶದಲ್ಲಿ ಮಹಾತ್ಮ ಗಾಂಧಿ ಚಿಂತನೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನವೇ ಗಾಂಧಿವಾದದ ಕೊಂಡಿಯೊಂದು ಕಳಚಿದಂತಾಗಿದೆ.

ನಗರದ ಹಿರಿಯ ಗಾಂಧಿವಾದಿ, ಸಮಾಜ ಸೇವಕ, ಅಪರಿಮಿತ ಓದುಗರಾದ ಸಿ.ಪಿ.ಹುಚ್ಚೇಗೌಡ(90) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಗಾಂಧಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಲೆಕ್ಕವಿಲ್ಲದಷ್ಟು ಕೆಲಸಗಳನ್ನು ಮಾಡಿದ್ದ ಹುಚ್ಚೇಗೌಡ ಅವರು 1934ರಲ್ಲಿ ಶಿವಮಾದೇಗೌಡ ಮತ್ತು ರುದ್ರಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಬಾಲ್ಯದಲ್ಲೇ ಹಲವು ಚಿಂತಕರು ಮತ್ತು ಹೋರಾಟಗಾರರ ವಿಚಾರಗಳತ್ತಾ ಆಸಕ್ತಿ ಬೆಳೆಸಿಕೊಂಡು ಎಸ್‌ಎಸ್‌ಎಲ್‌ಸಿಗೆ ವ್ಯಾಸಂಗ ಮುಂದುವರಿಸುವ ಇಚ್ಛೆಯನ್ನು ತೊರೆದಿದ್ದರು. ಬಳಿಕ ಗುತ್ತಿಗೆದಾರ ವೃತ್ತಿಯನ್ನು ಅವಲಂಬಿಸಿ, ನಡುವೆ ಹಲವು ವರ್ಷಗಳ ಕಾಲ ಸೌಧೆ ಡಿಪೋವನ್ನು ನಡೆಸಿಕೊಂಡು ಬರುತ್ತಿದ್ದರು. ನಗರದ ಹಿರಿಯ ಉದ್ಯಮಿ ವಿ.ಅನಂತಕುಮಾರ್ ಇವರಲ್ಲಿ ತರಬೇತಿ ಪಡೆದಿದ್ದರು ಎನ್ನಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಸ್ವಾಮಿ ಅಭೇದಾನಂದ, ಮಹಾತ್ಮ ಗಾಂಧಿ ಹಾಗೂ ಸ್ಥಳೀಯರಾಗಿದ್ದ ಸಿ.ಗೋಪಾಲರಾವ್ ಚಿಂತನೆ ಮತ್ತು ಹೋರಾಟದ ಬದುಕು ಹುಚ್ಚೇಗೌಡರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು.

ಬಹುದೊಡ್ಡ ಪುಸ್ತಕ ಪ್ರೇಮಿಯಾಗಿದ್ದ ಗಾಂಧಿವಾದಿ ಹುಚ್ಚೇಗೌಡರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹಲವು ಪುಸ್ತಕಗಳನ್ನು ಓದಿಕೊಂಡಿದ್ದರು. ಜತೆಯಲ್ಲಿ ಅಷ್ಟೂ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಸಾಮಾಜಿಕವಾಗಿ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಹ ಅನೇಕ ಕಾರ್ಯಗಳನ್ನು ಅವರು ಮಾಡಿದ್ದು, ಅವಿವಾಹಿತರಾಗಿಯೇ ಜೀವನ ಸಾಗಿಸಿದರು. 2009ರಲ್ಲಿ ಅವರ ಅಭಿಮಾನಿಗಳು ಸೇರಿ ‘ನಿಮಗೆ ನಮಸ್ಕಾರ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದಿದ್ದರು. ಓದು, ವಿಚಾರ ವಿನಿಮಯ, ನಡೆ, ನುಡಿ, ಪ್ರಾಮಾಣಿಕತೆಯಲ್ಲಿ ಗಾಂಧಿಯನ್ನು ಅನುಸರಿಸುತ್ತಿದ್ದ ಹುಚ್ಚೇಗೌಡ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಪ್ರಾಮಾಣಿಕತೆ ಗೆರೆ ದಾಟಲಿಲ್ಲ:
ಸಣ್ಣ ವಯಸ್ಸಿನಿಂದಲೇ ಮಹಾತ್ಮಗಾಂಧಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಹುಚ್ಚೇಗೌಡ ಅವರು ಬದುಕಿನ ಕೊನೆಯುಸಿರಿರುವ ವರೆಗೂ ಅಪ್ಪಟ ಗಾಂಧಿವಾದಿಯಾಗಿ ಬದುಕು ಸಾಗಿಸಿದರು. ಅವರ ಅಭಿಮಾನಿಗಳು ಹುಚ್ಚೇಗೌಡರನ್ನು ಗಾಂಧಿಯ ಪ್ರತಿರೂಪ ಎಂದೇ ಕರೆಯುತ್ತಿದ್ದರು. ಅದರಂತೆಯೇ ಅವರು ತಮ್ಮ ಬದುಕಿನುದ್ದಕ್ಕೂ ಎಂದಿಗೂ ಪ್ರಾಮಾಣಿಕತೆಯ ಗೆರೆಯನ್ನು ದಾಟಲಿಲ್ಲ. ನಿಜವಾದ ಧರ್ಮ, ದೇಶ ಪ್ರೇಮವನ್ನು ಗಾಂಧಿ ಚಿಂತನೆಗಳಿಂದ ಎರವಲು ಪಡೆದಿದ್ದ ಹುಚ್ಚೇಗೌಡ ಅವರು ತಮ್ಮ ಅಭಿಮಾನಿಗಳಿಗೂ ಅದನ್ನೇ ಉಣಬಡಿಸುತ್ತಿದ್ದರು. ಎಲೆಮರೆಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದ ಅವರು ಕರಿವರದರಾಜನ ಬೆಟ್ಟಕ್ಕೆ ಸ್ವಂತ ಖರ್ಚಿನಲ್ಲಿ ಮೆಟ್ಟಿಲು ಹಾಗೂ ರಸ್ತೆಯನ್ನು ಮಾಡಿಸಿದ್ದರು. ಹಲವು ಸಂಘ ಸಂಸ್ಥೆಗಳಿಗೆ ನೆರವು ನೀಡಿದ್ದರು.

ಪುಸ್ತಕ ಪ್ರೇಮಿ:
ಹಿರಿಯ ಗಾಂಧಿವಾದಿ ಹುಚ್ಚೇಗೌಡ ಅವರು ಬಹುದೊಡ್ಡ ಪುಸ್ತಕ ಪ್ರೇಮಿಯಾಗಿದ್ದರು ಎಂಬುದಕ್ಕೆ ಅವರ ಮನೆಯಲ್ಲಿ ಸಂಗ್ರಹಿಸಿರುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸುಮಾರು 4000ಕ್ಕಿಂತಲೂ ಹೆಚ್ಚು ಪುಸ್ತಕಳೇ ಸಾಕ್ಷಿ. ಜತೆಗೆ ಅವುಗಳನ್ನು ಓದಿಕೊಂಡಿದ್ದರು. ಯಾವುದೇ ವಿಚಾರದ ಮೇಲೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಸಂಗ್ರಹದ ಯಾವುದೇ ಪುಸ್ತಕಗಳನ್ನು ತೆಗೆದುಕೊಂಡರು ಇಂತಹದ್ದೇ ಮಾಹಿತಿ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಇದು ಅವರ ಓದಿನ ಇಚ್ಛಾಶಕ್ತಿಯನ್ನು ತೋರುತ್ತಿತ್ತು. ಅಮೆರಿಕಾವನ್ನು ಹೊರತುಪಡಿಸಿ ಹಲವು ದೇಶಗಳನ್ನು ಸುತ್ತಿರುವ ಅವರ ನಡೆಯಲ್ಲಿ ಸಾತ್ವಿಕ ಗುಣ ಬಿತ್ತರವಾಗುತ್ತಿತ್ತು. ಈ ಕಾರಣಕ್ಕೆ ಅಪಾರ ಅನುಯಾಯಿ ಮತ್ತು ಅಭಿಮಾನಿಗಳನ್ನು ಹೊಂದಿದ್ದರು.

ಧೀನಬಂಧು ಸಂಸ್ಥೆಗೆ ಅಡಿಗಲ್ಲು: ನಗರದ ಬಡ ಮಕ್ಕಳಿಗೆ ಶಿಕ್ಷಣದ ಧಾರೆ ಎರೆಯುತ್ತಿರುವ ಧೀನಬಂಧು ಸಂಸ್ಥೆ ಹಾಗೂ ಕರುಣಾ ಟ್ರಸ್ಟ್ ಸ್ಥಾಪನೆಯಲ್ಲಿ ಹುಚ್ಚೇಗೌಡರ ಆಶಯಗಳು ಅಡಗಿದೆ ಎಂದು ಹೇಳಲಾಗುತ್ತದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಜತೆಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಆ ಸಮಯದಲ್ಲಿ ಗಾಂಧಿವಾದಿ ಹುಚ್ಚೇಗೌಡ ಅವರು ಜಿ.ಎಸ್.ಜಯದೇವ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಆಗಾಗ ಪತ್ರ ವ್ಯವಹಾರದ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ದೀನದಂಧು ಶಿಕ್ಷಣ ಸಂಸ್ಥೆ ಹುಟ್ಟು ಪಡೆಯಲು ಹುಚ್ಚೇಗೌಡರ ಚಿಂತನೆಯೂ ಕಾರಣ ಎಂದು ಹೇಳಲಾಗುತ್ತದೆ. ಕರಣಾ ಟ್ರಸ್ಟ್ ಮತ್ತು ದೀನಬಂಧು ಎಂಬ ಹೆಸರನ್ನು ಇವರೇ ಸೂಚಿಸಿದರು ಎನ್ನಲಾಗುತ್ತದೆ. ಇದಕ್ಕೆ ಪುಷ್ಠಿ ಎಂಬಂತೆ ಡಾ. ಸುದರ್ಶನ್ ಅವರ ಕರುಣಾ ಟ್ರಸ್ಟ್, ಜಿ.ಎಸ್. ಜಯದೇವ ಅವರ ದೀನಬಂಧು ಸಂಸ್ಥೆ, ಸಂತ ಜೋಸೆಫರ ಸಂಸ್ಥೆ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳಿಗೆ ನೆರವು ನೀಡಿರುವುದೇ ಸಾಕ್ಷಿಯಾಗಿದೆ.

ಚಾಮರಾಜನಗರದ ಆಸ್ತಿಯಂತಿದ್ದ ಹುಚ್ಚೇಗೌಡ ಅವರು ನಮ್ಮ ನಡುವೆ ಇದ್ದ ಅಪ್ಪಟ ಗಾಂಧಿವಾದಿಯಾಗಿದ್ದರು. ಈ ಮೂಲಕ ಗಡಿಜಿಲ್ಲೆಯಲ್ಲಿ ಗಾಂಧಿವಾದದ ಕೊಂಡಿಯೊಂದು ಕಳಚಿದಂತಾಗಿದೆ. ಅವರು ಶತಾಯುಷಿಯಾಗುತ್ತಾರೆ ಎಂಬ ಕನಸು ಕಂಡಿದ್ದೆವು.ಶ್ರೀಧರ್ ಸಿರಿ, ಸಾಹಿತಿ ಮತ್ತು ಮೃತ ಹುಚ್ಚೇಗೌಡರ ಅನುಯಾಯಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net