

ಚಾಮರಾಜನಗರ : ಜಿಲ್ಲೆಯ ಚಿಕ್ಕಲ್ಲೂರು ಮತ್ತು ಕುರುಬನಕಟ್ಟೆ ಜಾತ್ರೆಯನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿದ್ದು, ಸರ್ಕಾರ ಮುಜರಾಯಿ ಇಲಾಖೆಯ ಸುಪರ್ದಿಗೆ ಒಪ್ಪಿಸಬೇಕು ಎಂದು ಸರ್ಕಾರಿ ಅಧಿನಿಯಮಗಳ ಜಾರಿಗಾಗಿ ಕಾವಲು ಸಮಿತಿ ಅಧ್ಯಕ್ಷ ಎಲ್.ನಾಗಣ್ಣ ಆಗ್ರಹಿಸಿದರು.
ಚಿಕ್ಕಲ್ಲೂರು, ಕುರುಬನಕಟ್ಟೆ, ಕಪ್ಪಡಿ ಹಾಗೂ ಬೊಪ್ಪೆಗೌಡನಪುರ ಜಾತ್ರೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಅರಸು ಮನೆತನದವರು ಸ್ವಂತ ಸ್ವತ್ತಾಗಿ ಬಳಕೆ ಮಾಡುತ್ತಿದ್ದಾರೆ. ಈ ಕ್ಷೇತ್ರಗಳಿಂದ ಬರುವ ಲಾಭವು ಇವರ ಪಾಲಾಗುತ್ತಿದೆ. ಆದರೆ ಸರ್ಕಾರ ಕಾನೂನು ಸುವ್ಯವಸ್ಥೆ, ರಕ್ಷಣೆ, ಸಾರಿಗೆ, ಆರೋಗ್ಯ ಮತ್ತು ಇನ್ನಿತರೆ ಕೆಲಸಗಳಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಚಿಕ್ಕಲ್ಲೂರು, ಕುರುಬನಕಟ್ಟೆ ಹಾಗೂ ಇನ್ನಿತರೆ ಕ್ಷೇತ್ರಗಳನ್ನು ಸರ್ಕಾರ ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಚಿಕ್ಕಲ್ಲೂರು ಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ವಿರುದ್ಧವಾಗಿ ಪ್ರಾಣಿದಯಾ ಸಂಘದ ದಯಾನಂದ ಸ್ವಾಮೀಜಿ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದು ಪ್ರಾಣಿಬಲಿ ನಿಷೇಧಕ್ಕೆ ಕಾರಣಾಗಿದ್ದಾರೆ. ನ್ಯಾಯಾಲಯದ ಆದೇಶದ ವಿರುದ್ಧವಾಗಿ ನಡೆಯುತ್ತಿರುವ ಕೆಲವು ಕಿಡಿಗೇಡಿಗಳು ಮಂಟೇಸ್ವಾಮಿ ಪರಂಪರೆ ರಕ್ಷಣಾ ಸಮಿತಿ ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮಜರುಗಿಸಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಸಮಿತಿಯ ಕಾನೂನು ಸಲಹೆಗಾರ ಎಂ.ರಾಮಕೃಷ್ಣ, ನಿರ್ದೇಶಕರಾದ ಎಸ್.ಪಂಚಾಕ್ಷರಿ, ಎ.ಕೆ.ಸೋಮನಾಥ್ ಹಾಜರಿದ್ದರು.