ಸಾವಯವ ಕೃಷಿಯಲ್ಲಿ ಖುಷಿ ಕಂಡ ಯುವ ರೈತ

20chn2
Published on

ಚಾಮರಾಜನಗರ: ಸಾವಯವ ಕೃಷಿಯಲ್ಲಿ ಅಡಕೆ, ತೆಂಗು ಮತ್ತು ನಿರಂತರವಾಗಿ ತರಕಾರಿ ಸೊಪ್ಪು ಬೆಳೆಯುವ ಮೂಲಕ ಯುವ ರೈತರೊಬ್ಬರು, ಅಧಿಕ ಆದಾಯ ಗಳಿಸುತ್ತಿದ್ದಾರೆ.

ತಾಲೂಕಿನ ಕೋಡಿಮೋಳೆ ಗ್ರಾಮದ ಶಿವನಂಜಶೆಟ್ಟಿ ಮತ್ತು ಗಂಗಮ್ಮ ಅವರ ಮೂವರು ಪುತ್ರರಲ್ಲಿ ಕೊನೆಯವರಾದ ಶಿವು(ನಂಜಪ್ಪ)ಚಾಮರಾಜನಗರದಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಉದ್ಯೋಗ ಅರಸಿ ಬೇರೆಲ್ಲೂ ಹೋಗದೆ ಕೃಷಿಯನ್ನು ಪ್ರಧಾನವಾಗಿಸಿಕೊಂಡಿದ್ದಾರೆ. ಗ್ರಾಮದಲ್ಲಿರುವ 7 ಎಕರೆ ಜಮೀನಿನಲ್ಲಿ ಪ್ರಸ್ತುತ 5 ಎಕರೆಯಲ್ಲಿ ಬೇಸಾಯ ಮಾಡುತ್ತಿದ್ದಾರೆ. ತೆಂಗು, ಅಡಕೆ, ಬಾಳೆ, ಈರುಳ್ಳಿ, ಬಿಟ್‌ರೂಟ್, ಮೂಲಂಗಿ ಇತರ ತರಕಾರಿ ಬೆಳೆಯುತ್ತಿದ್ದಾರೆ. ಜತೆಗೆ ನಿರಂತರವಾಗಿ ತರಕಾರಿ ಸೊಪ್ಪುಗಳನ್ನು ಬೆಳೆಯಲಾಗುತ್ತಿದೆ. 1 ಎಕರೆಯಲ್ಲಿ ಹಸುಗಳಿಗೆ ಮೇವಿನ ಬೆಳೆ ಬೆಳೆಸಲಾಗುತ್ತಿದೆ. ಕೃಷಿಯ ಜತೆಗೆ ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ಶಿವು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಹೆಚ್ಚಿನ ಲಾಭ ಕಾಣುತ್ತಿದ್ದಾರೆ.

ಹಲವು ವರ್ಷಗಳಿಂದ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದ ಶಿವು ಕುಟುಂಬ ಇತ್ತೀಚೆಗೆ ಎರಡು ಬೋರ್‌ವೆಲ್ ಕೊರೆಸಿದ್ದು, ಈಗ ಜಮೀನಿಗೆ ಬೋರ್‌ನಿಂದಲೇ ನೀರು ಬಳಕೆ ಮಾಡಲಾಗುತ್ತಿದೆ. ಶಿವು ಅವರ ಕೃಷಿ ಕಾಯಕಕ್ಕೆ ತಾಯಿ ಮತ್ತು ಸಹೋದರರು ಬೆನ್ನೆಲುಬಾಗಿ ನಿಂತಿದ್ದು, ವ್ಯವಸಾಯದಲ್ಲಿ ಸಹಕಾರ ನೀಡುತ್ತಾ ಬಂದಿದ್ದಾರೆ. ಸಾವಯವ ಬೇಸಾಯದಿಂದ ಹೆಚ್ಚು ಇಳುವರಿಯ ಜತೆಗೆ ವರ್ಷದಲ್ಲಿ 10-12 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಯುವರೈತ ಶಿವು ಉತ್ತಮ ಬದುಕು ಕಂಡುಕೊಂಡಿದ್ದಾರೆ.

ದನದ ಗೊಬ್ಬರವೇ ಆಧಾರ
ಜಮೀನಿನಲ್ಲಿ 2-3 ಟ್ರಾೃಕ್ಟರ್‌ನಷ್ಟು ಗೊಬ್ಬರ ಸಂಗ್ರಹಿಸುವ ತೊಟ್ಟಿ ನಿರ್ಮಾಣ ಮಾಡಲಾಗಿದ್ದು, ದನದ ಗೊಬ್ಬರವೇ ಕೃಷಿಗೆ ಆಧಾರವಾಗಿದೆ. ಇತ್ತೀಚಿನ ದಿನಗಳಲ್ಲಿನ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಹೆಚ್ಚಿನ ಕೃಷಿ ಮಾಡುವ ಜನರ ನಡುವೆ ಶಿವು ಸಾವಯವ ಪದ್ಧತಿಯಲ್ಲೇ ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಗೊಬ್ಬರಕ್ಕಾಗಿಯೇ 5-6 ದನಗಳನ್ನು ಸಾಕಲಾಗುತ್ತಿದೆ. ತೆಂಗು, ಅಡಕೆ ಹಾಗೂ ತರಕಾರಿ, ಸೊಪ್ಪುಗಳನ್ನು ಉತ್ತಮವಾಗಿ ಬೆಳೆಯಲು ಕೊಟ್ಟಿಗೆ ಗೊಬ್ಬರದ ಬಳಕೆಯೇ ಕಾರಣ ಎನ್ನುತ್ತಾರೆ ಶಿವು.

ತರಕಾರಿ ಬೆಳೆಯಲ್ಲಿ ಲಾಭ
ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, 1.20 ಎಕರೆಯಲ್ಲಿ ತರಕಾರಿ ಹಾಗೂ ಸೊಪ್ಪನ್ನು ಬೆಳೆಯಲಾಗುತ್ತಿದೆ. ಸದ್ಯ ಈರುಳ್ಳಿ, ಮೂಲಂಗಿ ಹಾಗೂ ಬಿಟ್ರೋಟ್ ಬೆಳೆಗಳಿವೆ. ಕೊತ್ತಂಬರಿ, ಪುದೀನ, ಮೆಂತ್ಯ, ಪಾಲಾಕ್, ದಂಟು, ಕಿಲಕೀರೆ ಇನ್ನಿತರ ಸೊಪ್ಪುಗಳನ್ನು ಬೆಳೆಸಲಾಗಿದೆ. ತಾವೇ ಸ್ವತಃ ಕೊಯ್ಲು ಮಾಡಿ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ. ಬೆಳೆಗಳನ್ನು ಸಾಗಾಟ ಮಾಡಲು ಟಾಟಾ ಎಸಿ ವಾಹನವನ್ನು ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಟ್ರ್ಯಾಕ್ಟರ್ ಖರೀದಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ, ಉಳಿದಿರುವ 2 ಎಕರೆ ಜಮೀನಿನಲ್ಲಿ ಕುರಿ ಸಾಕಣೆ ಯೋಜನೆ ಹಾಕಿದ್ದು, ಸದ್ಯ ಶೆಡ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಕುಟುಂಬದ ಸಹಕಾರ
ಯುವರೈತ ಶಿವು ಅವರ ಬೇಸಾಯದ ಬದುಕಿಗೆ ತಾಯಿ ಗಂಗಮ್ಮ ಹಾಗೂ ಇಬ್ಬರು ಅಣ್ಣಂದಿರು ಜತೆಗೆ ನಿಂತಿದ್ದಾರೆ. ಜಮೀನಿನ ಕೆಲಸಗಳಿಗೆ ತಮ್ಮನಿಗೆ ನೆರವಾಗುತ್ತಾರೆ. ಶಿವು ಅವರು ಸೊಪ್ಪು ಮಾರಾಟಕ್ಕೆ ಹೋದಾಗ ಸೊಪ್ಪು ಕೊಯ್ಲು ಮಾಡಲು ಇತರ ಕೆಲಸಗಳಲ್ಲಿ ಅಣ್ಣಂದಿರು ಜತೆಯಾಗುತ್ತಾರೆ. ಈ ಮೊದಲು ನೀರಿಗೆ ತೊಂದರೆಯಾಗಿತ್ತು ಸಹೋದರರ ಸಹಕಾರದಿಂದ, ಸರ್ಕಾರದಿಂದ ನೆರವು ಪಡೆದು ಗಂಗಾಕಲ್ಯಾಣ ಯೋಜನೆಯಡಿ ಎರಡು ಬೋರ್ ಕೊರೆಸಿದ್ದು, ತಾವು ಬಳಕೆ ಮಾಡಿ ಇತರರ ವ್ಯವಸಾಯಕ್ಕೂ ನೀರೊದಗಿಸಲಾಗುತ್ತಿದೆ. ಪದವಿ ಪಡೆದು ಕೂಲಿ ಕೆಲಸಕ್ಕೆ ಹೋಗುತ್ತಿದ್ದವರನ್ನು ಕೃಷಿ ಕೈಹಿಡಿದಿದ್ದು, ಸದ್ಯ ಲಾಭವನ್ನು ಕಂಡುಕೊಂಡಿದ್ದಾರೆ.

ಈ ಮೊದಲು ನಾನು ಬೇರೆಯವರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಸಾವಯವ ಬೇಸಾಯವನ್ನು ಅಳವಡಿಸಿಕೊಂಡು ನಿರಂತರ ತರಕಾರಿ ಬೆಳೆಯುತ್ತಿರುವುದರಿಂದ ನಾನೇ ಈಗ ಬೇರೆಯವರಿಗೆ ಕೆಲಸ ಕೊಡುವಂತಾಗಿದ್ದೇನೆ. ಕೃಷಿಯಲ್ಲಿ ಬದುಕು ತೃಪ್ತಿಕರವಾಗಿದೆ.ಶಿವು(ನಂಜಪ್ಪ),ಯುವರೈತ, ಕೊಡಿಮೋಳೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net