

ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಗತ್ ಸಿಂಗ್ ಯುವ ಸೇನೆ ವತಿಯಿಂದ ಸ್ವಾತಂತ್ರ ಹೋರಾಟಗಾರ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 127ನೇ ಜನ್ಮದಿನವನ್ನು ಆಚರಿಸಲಾಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಶಾಲಾ ಮುಖ್ಯ ಶಿಕ್ಷಕ ಸೋಮಸುಂದರ್ ಪುಷ್ಪಾರ್ಚನೆ ನೆರವೇರಿಸಿದರು. ಈ ವೇಳೆ ಸಂಘದ ಅಧ್ಯಕ್ಷ ಕಾಂತರಾಜು ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಸೇನೆ ಐಎನ್ಎ ಕಟ್ಟಿ, ಬ್ರಿಟಿಷರ ವಿರುದ್ಧ ಸೈನ್ಯ ಸಂಘಟಿತವಾಗಿ ಹೋರಾಟ ಮಾಡಿದ ಮೊದಲ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಅವರ ಜನ್ಮದಿನದ ಸಂದರ್ಭದಲ್ಲಿ ಇಂದಿನ ವಿದ್ಯಾರ್ಥಿಗಳು ಯುವಜನತೆ ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡಬೇಕು ಎಂದರು.
ನೇತಾಜಿ ಅವರು ಭಾರತವು ಶೋಷಣೆ ಮುಕ್ತ ಹಾಗೂ ಬಡತನ ನಿರ್ಮೂಲನೆ ಮುಕ್ತ ಭಾರತ ಆಗಬೇಕು ಎಂದು ಕನಸು ಕಂಡಿದ್ದರು. ಇದಕ್ಕಾಗಿ ನಾವುಗಳು ಸಂಘಟಿತರಾಗಿ ಹೋರಾಟಗಳನ್ನು ಕಟ್ಟಬೇಕು ಎಂದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಪ್ರಕಾಶ್, ಮನೋಜ್ ಸಾಹು, ಶೋಭ,ತೇಜಾವತಿ, ಶಿವು ಇತರರು ಇದ್ದರು.