

ಕೊಳ್ಳೇಗಾಲ: ಶ್ರೀ ಘನನೀಲಿ ಸಿದ್ದಪ್ಪಾಜಿ ಜಾತ್ರೆಯಲ್ಲಿ ಭಕ್ತರ ಧಾರ್ಮಿಕ ಆಚರಣೆಗೆ ಅಡಚಣೆ ಆಗದಂತೆ ಹಾಗೂ ಆಹಾರ ಪದ್ಧತಿ, ಸಹ ಭೋಜನ ಸಂಸ್ಕೃತಿಗೆ ತೊಂದರೆಯಾಗದಂತೆ ಶಾಸಕರು ಹಾಗೂ ಜಿಲ್ಲಾಡಳಿತ ಸಹಕಾರ ನೀಡಬೇಕೆಂದು ಒಕ್ಕೊರಲಿನಿಂದ ವಿವಿಧ ಸಂಘ, ಸಂಸ್ಥೆಯ ಮುಖಂಡರು ಹಾಗೂ ಸಾರ್ವಜನಿಕರು ಆಗ್ರಹಿಸಿದರು.
ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲೂರಿನ ಹಳೇ ಮಠದಲ್ಲಿ ಗುರುವಾರ ಆಯೋಜಿಸಿದ್ದ ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಾತ್ರೆ ಸಂಬಂಧ ಹಲವು ಚರ್ಚೆಗಳು ಸುದೀರ್ಘವಾಗಿ ನಡೆಯಿತು. ಶ್ರೀ ಮಂಟೇಸ್ವಾಮಿ ರಾಚಪ್ಪಾಜಿ ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಸದಸ್ಯ ಮಹದೇವ ಶಂಕನಪುರ ಮಾತನಾಡಿ, ಜಾತ್ರೆಗೆ ಭಕ್ತರಿಗೆ ತೊಂದರೆ ಆಗದಂತೆ, ಪೂಜೆ-ಹವನ, ಆಹಾರ ಪದ್ಧತಿಗೆ ಧಕ್ಕೆ ಆಗದಂತೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. ಸಿದ್ದಪ್ಪಾಜಿ ಒಕ್ಕಲಿನವರು ಜಾತ್ರೆಯಲ್ಲಿ ಸಿಹಿ, ಮಾಂಸ ಆಹಾರ ತಯಾರಿಸುವುದು ಪದ್ಧತಿ. 2017 ರಲ್ಲಿ ಬಂದ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಲ್ಲಿ ಭಕ್ತರ ಆಹಾರ ಪದ್ಧತಿಗೆ ದಕ್ಕೆ ಆಗಬಾರದೆಂಬ ಸೂಚನೆ ಇದೆ. ಇದನ್ನು ಪೊಲೀಸರು ಹಾಗೂ ಅಧಿಕಾರಿಗಳು ಪರಿಗಣಿಸಬೇಕು. ಪ್ರಾಣಿ ಬಲಿ ನಿಷೇಧ ಕಾಯ್ದೆ ಅನುಷ್ಠಾನ ಮಾಡುವ ಭರದಲ್ಲಿ ಭಕ್ತರನ್ನು ದೌರ್ಜನ್ಯ ಎಸಗಬೇಡಿ. ಸಿಕ್ಕ ಸಿಕ್ಕ ಕಡೆ ಕುರಿ-ಕೋಳಿ ಜಪ್ತಿ ಮಾಡಬೇಡಿ ಎಂದು ಒತ್ತಾಯಿಸಿದರು.
ಹನೂರು ಶಾಸಕ ಎಂ.ಆರ್ .ಮಂಜುನಾಥ್ ಮಾತನಾಡಿ, ಚಿಕ್ಕಲ್ಲೂರು ಜಾತ್ರೆ ಯಶಸ್ವಿಯಾಗಿ ನಡೆಯಲು ಅಧಿಕಾರಿಗಳು ಹಾಗೂ ಮಠದವರು ಅಗತ್ಯ ಮೂಲ ಸೌಕರ್ಯವನ್ನು ಒದಗಿಸಬೇಕು. ಭಕ್ತರು ದೇವರ ಸೇವೆ ಮಾಡಲು ಪೂರಕ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚು ಶೌಚಗೃಹಗಳು, ಸಮರ್ಪಕ ವಿದ್ಯುತ್ ಸೌಲಭ್ಯ ಇರಬೇಕು. ನೀರಿಗೆ ಕೊರತೆ ಆಗಬಾರದು. ಜಾತ್ರೆ ಯಶಸ್ವಿಯಾಗಿ ನಡೆಯಲು ಸಹಕಾರ ನೀಡುತ್ತೇನೆ. ದೇವಾಲಯಕ್ಕೆ ಬರುವ ರಸ್ತೆಯ ದುರಸ್ತಿ ಕೆಲಸ ತ್ವರಿತವಾಗಿ ಆಗಬೇಕು ಎಂದರು.
ಡಿವೈಎಸ್ಪಿ ಜಿ.ಯು. ಸೋಮೇಗೌಡ ಮಾತನಾಡಿ, ಹೈ ಕೋರ್ಟ್ ಆದೇಶ ಹಾಗೂ ಜಿಲ್ಲಾಡಳಿತದ ನಿರ್ದೇಶನವನ್ನು ಪರಿಪಾಲಿಸುತ್ತೇವೆ. ಜಾತ್ರೆಯಲ್ಲಿ ಕಾನೂನು ಉಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಪ್ರತಿ ವರ್ಷದಂತೆ ಈ ಬಾರಿಯು ಕಾನೂನು ಚೌಕಟ್ಟಿನಲ್ಲಿ ನಡೆಸುತ್ತೇವೆ ಎಂದರು.
ಮಳವಳ್ಳಿ ಮಠದ ಪೀಠಾಧ್ಯಕ್ಷ ವರ್ಚಸ್ವಿ ಶ್ರೀಕಂಠಸಿದ್ದಲಿಂಗ ರಾಜೇ ಅರಸ್ ಮಾತನಾಡಿ, ಕೆಲ ವರ್ಷಗಳಿಂದ ಶ್ರೀ ಸಿದ್ದಪ್ಪಾಜಿ ಜಾತ್ರೆಗೆ ಮಸಿ ತುಂಬಿದ್ದಾರೆ. ವಿಶ್ವ ಪ್ರಾಣಿ ದಯಾ ಸಂಘದ ಸ್ವಾಮೀಜಿ ಅವರು 2005-06 ರಲ್ಲಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆಯುತ್ತದೆ ಎಂದು ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 2017 ರಲ್ಲಿ ಹೈಕೋರ್ಟ್‌ನಲ್ಲಿ ಭಕ್ತರ ಆಹಾರ ಸಂಸ್ಕೃತಿಗೆ ಅಡಚಣೆ ಆಗಬಾರದು. ಪ್ರಾಣಿ ಬಲಿ ನಿಷೇಧ ಕಾಯ್ದೆಯೂ ಉಲಂಘನೆ ಆಗಬಾರದೆಂಬ ಆದೇಶ ನೀಡಿದೆ. ಜಾತ್ರೆಯಲ್ಲಿ ಬಲಿ ಕೊಡುವ ಪದ್ಧತಿಯಿಲ್ಲ. ಇಲ್ಲಿ ಯಾವುದೇ ಬಲಿ ಪೀಠವೂ ಇಲ್ಲ. ಜಿಲ್ಲಾಡಳಿತ ಭಕ್ತರ ಧಾರ್ಮಿಕ ಆಚರಣೆ ಹಾಗೂ ಅವರ ಸೇವಾ ಕಾರ್ಯಗಳಿಗೆ ಅನುಕೂಲ ಮಾಡಿ ಕೊಡಬೇಕು. ಒಂದು ಜಾಗ ನಿಗದಿ ಮಾಡಿ ಅಡುಗೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಮಂಜುಳಾ, ಇಒ ಶ್ರೀನಿವಾಸ್, ವೃತ್ತ ನಿರೀಕ್ಷಕ ಕೃಷ್ಣಪ್ಪ, ಪಿಡಿಒ ಶೋಭಾರಾಣಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ, ಸಂಸ್ಥೆ ಗಳ ಮುಖಂಡರು ಇದ್ದರು.