ಚಾಮರಾಜನಗರ : ತಾಲೂಕಿನ ಪುಣಜನೂರಿನಲ್ಲಿ ಸ್ಕೀಮ್ ನೌಕರರ ಸಂಘ ಹಾಗೂ ಸಿಐಟಿಯು ಚಾಮರಾಜನಗರ ಘಟಕದ ವತಿಯಿಂದ ಗುರುವಾರ ಯಶಸ್ವಿಯಾಗಿ ಪ್ರಚಾರ ಜಾಥಾ ನಡೆಯಿತು.
ಪುಣಗನೂರು ಗ್ರಾಮ ಪಂಚಾಯಿತಿಯಲ್ಲಿ ಜಮಾಯಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟು ಆಹಾರ,ಆರೋಗ್ಯ, ಶಿಕ್ಷಣ ಉಳಿಸಿ ದೇಶವನ್ನು ಅಭಿವೃದ್ಧಿಪಡಿಸಿ, ಸಮಾನ ವೇತನ ನಿಗದಿಪಡಿಸಿ, ಶ್ರಮಿಕರ ಬದುಕನ್ನು ಉಳಿಸಿ ಎಂಬ ಘೋಷಣೆ ಕೂಗುವ ಮೂಲಕ ಜನರಿಗೆ ಅರಿವು ಮೂಡಿಸಿದರು.
ಸಿಐಟಿಯು ಸಂಘಟನೆಯ ಅಧ್ಯಕ್ಷೆ ನಾಗಮಣಿ ಮಾತನಾಡಿ, ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳನ್ನು ಕಾಯಂಗೊಳಿಸಬೇಕು 1 ಕೋಟಿ ನೌಕರರಿಗೆ ಕನಿಷ್ಠ ವೇತನ,ನಿವೃತ್ತಿ ಸೌಲಭ್ಯ ನೀಡಬೇಕು, ಅಲ್ಲದೆ ಎನ್‌ಇಪಿ ಯೋಜನೆ ನಿಲ್ಲಿಸಬೇಕು ಎಂದು ತಿಳಿಸಿದರು.
ಸಂಘಟನೆಯ ಕಾರ್ಯದರ್ಶಿ ಶಾಹಿದಾಬಾನು ಮಾತನಾಡಿ, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಹಣ ನೀಡಬೇಕು, ಬಿಸಿಯೂಟ ನೌಕರರಿಗೆ ಪರಿಹಾರ ನೀಡದೆ ನಿವೃತ್ತಿ ಮಾಡಬಾರದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.
ಸಿಐಟಿಯು ಸಂಘಟನೆಯ ಪದಾಧಿಕಾರಿಗಳಾದ ಶಬಾನಾಬಾನು, ಚಿಕ್ಕತಾಯಮ್ಮ, ಗೀತಾ, ಕನ್ನಡ ರಕ್ಷಣಾ ವೇದಿಕೆಯ ಆರ್.ಸುರೇಶ್, ಝಾಕೀರ್, ಕುಮಾರ್, ಸುಮತಿ ಗ್ರಂಥಾಲಯ ಮೇಲ್ವಿಚಾರಕ ವೆಂಕಟೇಶ್, ವೆಂಕಟಯ್ಯನಛತ್ರ ವೃತ್ತದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.