ತಂದೆ ಸ್ಥಾನದ ಬಗ್ಗೆ ಪುತ್ರನಿಗೆ ಸಂಶಯ

bjp-Kollegala-N.Mahesh
Published on

ಚಾಮರಾಜನಗರ: ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದರೆ ಅವರಿಗೂ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಸಂಶಯವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಟೀಕಿಸಿದರು.

ತಾಲೂಕಿನ ಸಂತೇಮರಹಳ್ಳಿಯಲ್ಲಿ ಗುರುವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ನಮ್ಮ ತಂದೆ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಲ್ಲೇ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಅನ್ನೋ ಪ್ರಶ್ನೆ ಇದೆ. ಮುಖ್ಯಮಂತ್ರಿ ಪುತ್ರ ಈ ಬಗ್ಗೆ ಮಾತನಾಡುತ್ತಾರೆ ಅಂದರೆ ಅಲ್ಲಿಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅವರಿಗೂ ಸಂಶಯವಿದೆ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಅಂತ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.

ಯತೀಂದ್ರ ಸಿದ್ದರಾಮಯ್ಯ ಈ ರೀತಿ ಮಾತನಾಡುವುದರಿಂದ ಡಿಕೆಶಿ ಕನಸು ಚಿಗುರಿದಂತೆ ಆಗಿದೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಅನ್ನುವುದೇ ಆದರೆ, ಡಿ.ಕೆ.ಶಿವಕುಮಾರ್ ಅವರು ಏನು ಮಾಡಬೇಕು. ಗೆದ್ದರೆ ಅನ್ನುವ ಪ್ರಶ್ನೆ ಇದೆ. ಅಂದರೆ ಅವರು ಗೆಲ್ಲುವುದಿಲ್ಲ ಎಂದರ್ಥ. ಈ ಹೇಳಿಕೆ ಮೂಲಕ ಯತೀಂದ್ರ ಅವರಲ್ಲಿ ಎಷ್ಟು ಗೊಂದಲಗಳು ಇದೆ ಎಂಬುದು ತಿಳಿಯುತ್ತದೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net