ನಿಷ್ಠೆ ಉಳಿಸಿಕೊಂಡಿರುವ ನಿರಂಜನ್‌ಕುಮಾರ್‌ಗೆ ಪಟ್ಟ

18chn3
Published on

ಚಾಮರಾಜನಗರ : ಭಾರತೀಯ ಜನತಾ ಪಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಿಷ್ಠೆಯನ್ನು ಉಳಿಸಿಕೊಂಡಿರುವ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಗುರುವಾರ ನೂತನ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡಿದರು.

ನಗರದ ಕುಲುಮೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರಿಗೆ ಪಕ್ಷದ ಶಾಲು ಹೊದಿಸಿ, ಧ್ವಜವನ್ನು ನೀಡುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನಿರಂಜನ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವ ಸಮಯದಲ್ಲಿ ಬಿ.ವೈ.ವಿಜಯೇಂದ್ರ ಅವರು ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಪಕ್ಷ ಸಂಘಟನೆಗೆ ಬಲ ಬಂದಿದೆ. ಯುವ ಕಾರ್ಯಕರ್ತರು ಹೆಚ್ಚಿನ ಉತ್ಸಾಹ, ವಿಶ್ವಾಸ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಬಹುದೊಡ್ಡ ಸವಾಲು ಇರುವ ಸಂದರ್ಭದಲ್ಲಿ ನನಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಪಕ್ಷದ ಹಿರಿಯರಿಂದ ಸಲಹೆ ಪಡೆದು, ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಭ್ರಮನಿರಸನವಾಗಿದ್ದು, ಅಸ್ತಿತ್ವ ಕಳೆದುಕೊಂಡಿರುವ ಸರ್ಕಾರ ಅಧಿಕಾರದಲ್ಲಿದೆ. ಶಾಸಕರು ಅಭಿವೃದ್ಧಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜಗತ್ತು ಮೆಚ್ಚುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಳಿಸಿಕೊಳ್ಳಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕಿದೆ. ಈ ದೃಷ್ಟಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶಮುಖ್ಯ ಎಂಬ ಚಿಂತನೆಯಲ್ಲಿ ಪಕ್ಷವನ್ನು ಕಟ್ಟಲಾಗಿದೆ. ನಮ್ಮ ದೇಶ ಕವಲುದಾರಿಯಲ್ಲಿ ನಿಂತಿರುವ ಸಂದರ್ಭದಲ್ಲಿ, ಬಿಜೆಪಿ ಪಕ್ಷದ ಹೆಗಲಿಗೆ ಹೆಗಲು ಕೊಟ್ಟು ಅಭೂತಪೂರ್ವ ಯಶಸ್ಸನ್ನು ಗಳಿಸಬೇಕಿದೆ. ಪಕ್ಷ ಸಂಘಟನೆ ಮಾಡುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದರೆ ಸಮಸ್ಯೆಗಳ ಭಾಗವಾಗದೆ ಪರಿಹಾರದ ಭಾಗವಾಗಬೇಕು. ಈ ನಿಟ್ಟಿನಲ್ಲಿ ನಿರಂಜನ್‌ಕುಮಾರ್ ಯಶಸ್ವಿಯಾಗುತ್ತಾರೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ವರ್ಗದ ಕಾರ್ಯಕರ್ತರನ್ನು ನೂತನ ಜಿಲ್ಲಾಧ್ಯಕ್ಷರು ಒಂದಾಗಿ ಕರೆದುಕೊಂಡು ಹೋಗಬೇಕಿದೆ. ಕಾರ್ಯಕರ್ತರ ಜತೆಯಲ್ಲಿ ನಿರಂತರ ಸಂಪರ್ಕ, ಸಹಯೋಗ, ಸೇವೆ, ಸಮರ್ಪಣಾ ಮನೋಭಾವವಿದ್ದರೆ ಉತ್ತಮ ಸಂಘಟನೆ ಸಾಧ್ಯವಾಗುತ್ತದೆ. ಪದಾಧಿಕಾರಿಗಳು ಲೆಟರ್‌ಹೆಡ್‌ಗೆ ಸೀಮಿತವಾಗದೆ ಸ್ವಾಭಿಮಾನ ಮತ್ತು ಸ್ವಾವಲಂಬನೆ ಮೂಲಕ ಪಕ್ಷವನ್ನು ಮುನ್ನಡೆಸಬೇಕು ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮಾಜಿ ಶಾಸಕ ಎಸ್.ಬಾಲರಾಜ್, ರಾಷ್ಟ್ರೀಯ ಒಬಿಸಿ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಕೊಡಸೋಗೆ ಶಿವಬಸಪ್ಪ, ಡಾ.ಪ್ರೀತನ್ ನಾಗಪ್ಪ, ಅರಕಲವಾಡಿ ನಾಗೇಂದ್ರ, ನಾಗಶ್ರೀಪ್ರತಾಪ್, ನಗರಸಭಾ ಸದಸ್ಯರಾದ ಆಶಾ ನಟರಾಜ್, ಕುಮುದಾ ಕೇಶವಮೂರ್ತಿ, ಗಾಯತ್ರಿ ಇತರರು ಉಪಸ್ಥಿತರಿದ್ದರು.

ಸಂಕಷ್ಟದ ಸಂದರ್ಭದಲ್ಲಿ ಪಟ್ಟ:
ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಂತಹ ಸಮಯದಲ್ಲಿ ಪಕ್ಷದ ಹೊಣೆಗಾರಿಕೆಯನ್ನು ಒತ್ತುಕೊಳ್ಳುವುದು ತುಂಬ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ನೂತನ ಜಿಲ್ಲಾಧ್ಯಕ್ಷ ನಿರಂಜನ್‌ಕುಮಾರ್ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಹೇಳಿದರು. ಈ ಹಿಂದಿನ ಅಧ್ಯಕ್ಷರು ಹಲವು ಕೆಲಸಗಳನ್ನು ಮಾಡಿದ್ದರು. ಯಾರದ್ದೇ ಹೇಳಿಕೆ ಮಾತುಗಳನ್ನು ಕೇಳದೆ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಜತೆಗೆ ಕರೆದುಕೊಂಡು ಹೋಗಿ ಎಂದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಮಾತನಾಡಿ, ಬಿಜೆಪಿಯಲ್ಲಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ ಬಳಿಕ, ಹೊಸ ಹುರುಪಿನಿಂದ ಮುನ್ನಡೆಯುವುದು ವಾಡಿಕೆಯಾಗಿದೆ. ಅದರಂತೆ ಎಲ್ಲ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ರಾಜ್ಯಾಧ್ಯಕ್ಷರು ಒಬ್ಬ ಯುವ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಲ್ಲರೂ ಜತೆಯಾಗಿ ಇರುತ್ತೇವೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಸ್ಥಾನ ಎಂಬುವುದು ಕಷ್ಟದ ಹುದ್ದೆಯಾಗಿದೆ. ಎಲ್ಲ ಸಮಾಜದವರನ್ನು ಒಂದೇ ಎಂದು ಭಾವಿಸಿ, ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಡಬೇಕು. ಇದರಲ್ಲಿ ನಿರಂಜನ್‌ಕುಮಾರ್ ಯಶಸ್ಸು ಸಾಧಿಸುತ್ತಾರೆ ಎಂದು ಭಾವಿಸಿದ್ದೇನೆ. ಮುಂಬರುವ ಲೋಕಸಭೆ ಮತ್ತು ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ.ಎಸ್.ಮಹದೇವಯ್ಯಮಾಜಿ ಅಧ್ಯಕ್ಷ, ಕಾಂಪೋಸ್ಟ್ ಅಭಿವೃದ್ಧಿ ನಿಗಮ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net